ಆವಾಸಸ್ಥಾನ
ಆವಾಸಸ್ಥಾನವು ಒಂದು ನಿರ್ದಿಷ್ಟ ಪ್ರಾಣಿ, ಸಸ್ಯ ಅಥವಾ ಇತರ ಪ್ರಕಾರದ ಜೀವಿಯ ಪ್ರಜಾತಿಯಿಂದ ನೆಲೆಸಲ್ಪಟ್ಟ ಒಂದು ಪಾರಿಸರಿಕ ಪ್ರದೇಶ. ಈ ಪದವು ವಿಶಿಷ್ಟವಾಗಿ ಒಂದು ಜೀವಿಯು ಇರುವ ಮತ್ತು ತನ್ನ ಆಹಾರ, ವಸತಿ, ಸುರಕ್ಷತೆ ಹಾಗೂ ಸಂತಾನೋತ್ಪತ್ತಿಗಾಗಿ ಸಂಗಾತಿಯನ್ನು ಕಂಡುಕೊಳ್ಳುವ ಪ್ರಾಂತವನ್ನು ಸೂಚಿಸುತ್ತದೆ. ಇದು ಜೀವಿಯು ಇರುವ ನೈಸರ್ಗಿಕ ಆವರಣವಾಗಿದೆ, ಅಥವಾ ಒಂದು ಪ್ರಜಾತಿಯ ನಿವಾಸಿಗಳನ್ನು ಸುತ್ತುವರಿದ ಭೌತಿಕ ಆವರಣವಾಗಿದೆ.
ಒಂದು ಆವಾಸಸ್ಥಾನವು ಮಣ್ಣು, ತೇವ, ತಾಪಮಾನದ ವ್ಯಾಪ್ತಿ ಹಾಗೂ ಬೆಳಕಿನ ತೀಕ್ಷ್ಣತೆಯಂತಹ ಭೌತಿಕ ಅಂಶಗಳಿಂದ ಜೊತೆಗೆ ಆಹಾರದ ಲಭ್ಯತೆ ಹಾಗೂ ಪರಭಕ್ಷಕಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯಂತಹ ಜೈವಿಕ ಅಂಶಗಳಿಂದ ಮಾಡಲ್ಪಟ್ಟಿರುತ್ತದೆ. ಪ್ರತಿ ಜೀವಿಗೆ ಅಭಿವೃದ್ದಿಯಾಗಲು ನಿರ್ದಿಷ್ಟ ಆವಾಸಸ್ಥಾನ ಅಗತ್ಯಗಳಿರುತ್ತವೆ, ಆದರೆ ಕೆಲವು ವ್ಯಾಪಕ ಬದಲಾವಣೆಗಳಿಗೆ ಸಹಿಷ್ಣುವಾಗಿದ್ದರೆ ಬೇರೆಯವಕ್ಕೆ ಬಹಳ ನಿರ್ದಿಷ್ಟ ಅಗತ್ಯಗಳಿರುತ್ತವೆ. ಆವಾಸಸ್ಥಾನವು ಅಗತ್ಯವಾಗಿ ಒಂದು ಭೌಗೋಳಿಕ ಪ್ರದೇಶವಾಗಿರಬೇಕು ಎಂದೇನಿಲ್ಲ, ಅದು ಒಂದು ಕಾಂಡದ ಒಳಭಾಗ, ಕೊಳೆತ ಕೊರಡು, ಬಂಡೆ, ಅಥವಾ ಪಾಚಿಯ ರಾಶಿಯಾಗಿರಬಹುದು, ಮತ್ತು ಒಂದು ಪರಾವಲಂಬಿ ಜೀವಿಗೆ ಅದು ಆಶ್ರಯದಾತ ಜೀವಿಯ ಶರೀರ, ಅನ್ನನಾಳದಂತಹ ಆಶ್ರಯದಾತ ಜೀವಿಯ ಶರೀರದ ಭಾಗ, ಅಥವಾ ಆಶ್ರಯದಾತ ಜೀವಿಯಲ್ಲಿನ ಒಂದು ಒಂಟಿ ಜೀವಕೋಶವಾಗಿರಬಹುದು.
ಆವಾಸಸ್ಥಾನ ಪ್ರಕಾರಗಳಲ್ಲಿ ಧ್ರುವಪ್ರದೇಶಗಳು, ಸಮಶೀತೋಷ್ಣ, ಉಪೋಷ್ಣವಲಯ ಮತ್ತು ಉಷ್ಣವಲಯ ಪ್ರದೇಶಗಳು ಸೇರಿವೆ. ಭೂಮಿಯ ಸಸ್ಯವರ್ಗದ ಪ್ರಕಾರ ಕಾಡು, ಬೆಂಗಾಡು, ಹುಲ್ಲುಗಾವಲು, ಅರೆ ಶುಷ್ಕ ಅಥವಾ ಮರುಭೂಮಿಯಾಗಿರಬಹುದು. ಸಿಹಿನೀರಿನ ಆವಾಸಸ್ಥಾನಗಳಲ್ಲಿ ಜವುಳು ಭೂಮಿಗಳು, ತೊರೆಗಳು, ನದಿಗಳು, ಸರೋವರಗಳು, ಕೊಳಗಳು ಹಾಗೂ ನದೀಮುಖಗಳು ಸೇರಿವೆ ಮತ್ತು ಕಡಲ ಆವಾಸಸ್ಥಾನಗಳಲ್ಲಿ ಉಪ್ಪು ಜವುಗು ಭೂಮಿಗಳು, ಕರಾವಳಿ, ಅಂತರಭರತ ವಲಯ, ದಿಬ್ಬಗಳು, ಕೊಲ್ಲಿಗಳು, ತೆರೆದ ಸಮುದ್ರ, ಸಮುದ್ರ ತಳ, ನಡುಸಮುದ್ರ ಮತ್ತು ಜಲೋಷ್ಣೀಯ ದ್ವಾರಗಳು ಸೇರಿವೆ.
ಜೀವಿಗಳ ಹರಡಿಕೆ ಮೇಲೆ ಪ್ರಭಾವ ಬೀರುವ ಮುಖ್ಯ ಪಾರಿಸರಿಕ ಅಂಶಗಳೆಂದರೆ ತಾಪಮಾನ, ಆರ್ದ್ರತೆ, ವಾಯುಗುಣ, ಮಣ್ಣಿನ ಬಗೆ ಹಾಗೂ ಬೆಳಕಿನ ತೀವ್ರತೆ, ಮತ್ತು ಅದನ್ನು ಉಳಿಸಿಕೊಳ್ಳಲು ಜೀವಿಗೆ ಬೇಕಾದ ಎಲ್ಲ ಅಗತ್ಯಗಳ ಉಪಸ್ಥಿತಿ ಅಥವಾ ಅನುಪಸ್ಥಿತಿ. ಸಾಮಾನ್ಯವಾಗಿ ಹೇಳುವುದಾದರೆ, ಪ್ರಾಣಿ ಸಮುದಾಯಗಳು ನಿರ್ದಿಷ್ಟ ಪ್ರಕಾರಗಳ ಸಸ್ಯ ಸಮುದಾಯಗಳ ಮೇಲೆ ಅವಲಂಬಿಸಿರುತ್ತವೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Everyman's Encyclopedia; Volume 4. J.M. Dent. 1967. p. 581. ASIN B0015GRC04.