ಇಂಗಾಲದ ಮಾನಾಕ್ಸೈಡ್ ವಿಷವೇರಿಕೆ
ಇಂಗಾಲದ ಮಾನಾಕ್ಸೈಡ್ (CO) ಮಿಶ್ರಿತವಾದ ಗಾಳಿಯನ್ನು ಸ್ವಲ್ಪಕಾಲ ಎಡೆಬಿಡದೆ ಉಸಿರಾಡಿದರೆ ತಲೆದೋರುವ ಪರಿಣಾಮ (ಕಾರ್ಬನ್ ಮಾನಾಕ್ಸೈಡ್ ಪಾಯ್ಸನಿಂಗ್).[೧] ಈ ಅನಿಲಕ್ಕೆ ವಾಸನೆ ಬಣ್ಣ ಯಾವುದೂ ಇಲ್ಲ. ಆದ್ದರಿಂದ ಉಸಿರಾಟದ ಗಾಳಿಯಲ್ಲಿ ಇಂಗಾಲದ ಮಾನಾಕ್ಸೈಡ್ ಇದ್ದರೆ ಅದನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಹೀಗೆ ತಿಳಿಯದೆ ಸೇವಿಸಿದ ಈ ಅನಿಲದ ಪರಿಣಾಮ ಘೋರವಾಗಿರುವುದು. ರಕ್ತದ ಬಣ್ಣಕ್ಕೆ ಕಾರಣವಾದ ರಕ್ತಬಣ್ಣಕದೊಡನೆ (ಹೀಮೋಗ್ಲಾಬಿನ್) ಇದು ಬಲು ಸುಲಭವಾಗಿ ಕೂಡಿ ವಿಷವಾಗಿ ಪರಿಣಮಿಸುತ್ತದೆ. ಹಾಗೆ ಸಂಯೋಗವಾಗಿ ಬರುವ ಕಾರ್ಬಾಕ್ಸಿಹೀಮೋಗ್ಲಾಬಿನ್ ರಕ್ತಬಣ್ಣಕದಂತೆ ಆಕ್ಸಿಜನ್ನನ್ನು ಹೀರಿಕೊಳ್ಳದ್ದರಿಂದ ತಕ್ಕಷ್ಟು ಆಕ್ಸಿಜನ್ ಮೈಗೆ ಒದಗುವುದಿಲ್ಲ. ಮೈಯಲ್ಲಿಯೇ ಉಳಿದಿರುವ ರಕ್ತಬಣ್ಣಕ ಇಂಗಾಲಾಮ್ಲದ ಸಂಗದಲ್ಲಿದ್ದಾಗ ತನ್ನಲ್ಲಿರುವ ಆಕ್ಸಿಜನ್ನನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಗ್ರೀಕರೂ ರೋಮನ್ನರೂ ಕೈದಿಗಳನ್ನು ಮರಣದಂಡನೆಗೆ ಗುರಿಪಡಿಸಿದಾಗ ಇಂಗಾಲದ ಮಾನಾಕ್ಸೈಡನ್ನು ವಿಷವಾಗಿ ಬಳಸುತ್ತಿದ್ದರಂತೆ. ಇದರ ವಿಷವೇರಿಕೆ ಮುಖ್ಯವಾಗಿ ಆಕಸ್ಮಿಕವಾಗಿ ಆಗುತ್ತದೆ. ಅನೇಕವೇಳೆ ಆತ್ಮಹತ್ಯೆಗಳಲ್ಲೂ ಅಪರೂಪವಾಗಿ ಕೊಲೆಗಳಲ್ಲೂ ಕಂಡುಬರುತ್ತದೆ.
ಇಂಗಾಲದ ಮಾನಾಕ್ಸೈಡ್ ಕಬ್ಬಿಣ ಕಾರ್ಖಾನೆಗಳಿಂದ ಹೊರಡುವ ಅನಿಲದಲ್ಲೂ ಸಿಡಿಮದ್ದುಗಳು ಸಿಡಿದಾಗಲೂ ಬೆಂಕಿ ಬಿದ್ದೆಡೆಗಳಲ್ಲೂ ಕಾಣಬರುವುದು. ಈ ಅನಿಲ ಇರುವುದೇ ಗೊತ್ತಾಗದೆ ವಿಷವೇರಿಕೆ ಆಕಸ್ಮಿಕವಾಗಿ ಆಗಬಹುದು. ಅನೇಕ ದೇಶಗಳಲ್ಲಿ ದೀಪಕ್ಕೂ ಒಲೆಗೂ ಬಳಸುವ ಕಲ್ಲಿದ್ದಲಿನ ಅನಿಲದಲ್ಲಿ ಸುಮಾರು 6%-12% ಇಂಗಾಲ ಮಾನಾಕ್ಸೈಡು ಇರುತ್ತದೆ. ಗಾಳಿಯಾಡದ ಕೋಣೆಗಳಲ್ಲಿ ಇದ್ದಲಿನ ಅಗ್ಗಿಷ್ಟಿಕೆಯನ್ನು ಬಹಳ ಹೊತ್ತು ಉರಿಸುತ್ತಿದ್ದರೆ ಇಂಗಾಲದ ಮಾನಾಕ್ಸೈಡ್ ತಯಾರಾಗಿ ಕೋಣೆ ತುಂಬ ಬಹಳಷ್ಟು ತುಂಬುತ್ತದೆ. ಕೋಣೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಕಲ್ಲಿದ್ದಲಿನ ಅನಿಲವನ್ನು ಹೊರಬಿಟ್ಟುಕೊಂಡು ಪ್ರಾಣ ಕಳೆದುಕೊಳ್ಳುವುದು ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಸಾಮಾನ್ಯ. ಚಳಿಗಾಲದಲ್ಲಿ ಬೆಚ್ಚಗಿರಲು ಕೊಠಡಿಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಬೆಂಕಿ ಹೊತ್ತಿಸಿ ಉರಿಯಬಿಡುವುದು ಭಾರತದಲ್ಲೂ ಇರುವ ಒಂದು ಅಪಾಯಕರ ವಾಡಿಕೆ. ಆಗ ಬೆಂಕಿ ಉರಿಯಿಂದಾಗುವ ಇಂಗಾಲ ಮಾನಾಕ್ಸೈಡನ್ನು ಮಲಗಿದ್ದವರು ಗೊತ್ತಾಗದೆಯೇ ಇಡೀ ರಾತ್ರಿ ಸೇವಿಸಿ ಸತ್ತಿದ್ದಾರೆ. ಮೋಟಾರು ವಾಹನಗಳು, ವಿಮಾನ ಮುಂತಾದ ಅಂತರ್ದಹನ (ಇಂಟರ್ನಲ್-ಕಂಬಶ್ಚನ್) ಯಂತ್ರಗಳು ಕೆಲಸ ಮಾಡುವಾಗ ಉಚ್ಚಾಟಿಸಿದ ಅನಿಲದಲ್ಲಂತೂ (ಎಕ್ಸಾಸ್ಟ್ ಗ್ಯಾಸ್) ಇಂಗಾಲದ ಮಾನಾಕ್ಸೈಡ್ ಹೆಚ್ಚಾಗಿ ಇದ್ದೇ ಇರುತ್ತದೆ. 20 ಅಶ್ವಸಾಮರ್ಥ್ಯದ ಒಂದು ಮೋಟಾರು ಕಾರನ್ನು ಅದು ಇರುವ ಕೋಣೆಯಲ್ಲೇ ಐದೇ ಮಿನಿಟು ನಡೆಸಿದರೂ ಅಲ್ಲಿನ ಗಾಳಿಯಲ್ಲಿ ಪ್ರಾಣಾಪಾಯಕರ ಮಟ್ಟಕ್ಕೇರುವಷ್ಟು ಇಂಗಾಲ ಮಾನಾಕ್ಸೈಡ್ ಸೇರಿರುತ್ತದೆ. ಆಗ ವಾಹನಚಾಲಕ ಬೇಗ ಹೊರಬರದಿದ್ದರೆ ಇಂಗಾಲದ ಮಾನಾಕ್ಸೈಡ್ ವಿಷವೇರುತ್ತದೆ. ನಗರಗಳಲ್ಲಿ ಕಾರು, ಬಸ್ಸುಗಳು ಸಂದಣಿಯಾಗಿ ಚಲಿಸುತ್ತಿರುವಾಗ ಸಂದುಗೊಂದುಗಳಲ್ಲಿ ಹೀಗೆ ಹೊರಬೀಳುವ ಇಂಗಾಲ ಮಾನಾಕ್ಸೈಡ್ ಆವರಣದಲ್ಲಿ ಕ್ರಮೇಣ ಹೆಚ್ಚಾಗಿ ಓಡಾಡುವ ಜನರಿಗೂ ವಿಶೇಷವಾಗಿ ಅಲ್ಲೇ ಯಾವಾಗಲೂ ಇರುವ ನಿಯಂತ್ರಕ ಪೊಲೀಸರಿಗೂ ವಿಷವೇರುವುದು ಹೆಚ್ಚಲ್ಲ. ಅವರಲ್ಲಿ ತಲೆನೋವು, ಮನಸ್ಸಿನ ಚಂಚಲತೆ ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ. ಮೋಟಾರು ಕಾರುಗಳಿಗೇ ಮೀಸಲಾಗಿರುವ ನೆಲ ಸುರಂಗ ಮಾರ್ಗಗಳಲ್ಲಿ ಈ ವಿಷವೇರಿಕೆಯನ್ನು ತಡೆಯಲು ಗಾಳಿ ಬೀಸುತ್ತಿರುವಂತೆ ಏರ್ಪಾಡುಗಳಿರುತ್ತವೆ. ರಕ್ತಕೊರತೆಯವರು (ಅನೀಮಿಕ್ಸ್), ವಯಸ್ಸಾದವರು, ಎಳೆಯರೂ ಈ ವಿಷವೇರಿಕೆಗೆ ಸುಲಭವಾಗಿ ಈಡಾಗುತ್ತಾರೆ. ಅನಿಲ ವಿಷವೇರಿಕೆಯ ಸಾವುಗಳಲ್ಲೆಲ್ಲ ಇಂದಿಗೂ ಇಂಗಾಲದ ಮಾನಾಕ್ಸೈಡ್ ವಿಷವೇರಿಕೆಯದೇ ಹೆಚ್ಚು.[೨]
ಇಂಗಾಲದ ಮಾನಾಕ್ಸೈಡ್ ಮೈಗೂಡಿದ ಮೇಲೆ ಅಲ್ಲೇ ನೆಲೆಸುವುದರಿಂದ ಇದರ ವಿಷವೇರಿಕೆ ಬರುಬರುತ್ತ ಏರುತ್ತದೆ. ಉಸಿರಿನಲ್ಲಿ ತುಸುವೇ ಇಂಗಾಲದ ಮಾನಾಕ್ಸೈಡ್ ಇದ್ದರೂ ಅದರ ಪ್ರಮಾಣ ಕ್ರಮೇಣ ದೇಹದಲ್ಲಿ ಹೆಚ್ಚಾಗಿ ಪ್ರಾಣಾಪಾಯವೇ ಸಂಭವಿಸಬಹುದು. ಇಂಗಾಲದ ಮಾನಾಕ್ಸೈಡಿನ ಪ್ರಮಾಣ ರಕ್ತಬಣ್ಣಕದಲ್ಲಿ ಹೆಚ್ಚಾದಂತೆ ಹೆಚ್ಚು ಹೆಚ್ಚು ರಕ್ತಬಣ್ಣಕ ಕೆಟ್ಟು ವಿಷವೇರಿಕೆ ತೀವ್ರವಾಗುತ್ತದೆ. ಉಸಿರಾಡುವ ಗಾಳಿಯಲ್ಲಿ ಆಕ್ಸಿಜನ್ ಇಂಗಾಲದ ಮಾನಾಕ್ಸೈಡಿನ 300ರಷ್ಟಿದ್ದರೂ ರಕ್ತದಲ್ಲಿರುವ ಅರೆಪಾಲು ರಕ್ತಬಣ್ಣಕ ಆಕ್ಸಿಜನ್ನಿನೊಡನೆಯೂ ಉಳಿದ ಅರೆಪಾಲು ಇಂಗಾಲದ ಮಾನಾಕ್ಸೈಡಿನೊಂದಿಗೂ ಕೂಡಿಕೊಳ್ಳುತ್ತದೆ. ರಕ್ತಬಣ್ಣಕಕ್ಕಿರುವ ಗುರುತ್ವವನ್ನು ಇದು ತೋರಿಸುತ್ತದೆ. ಮೈರಕ್ತದಲ್ಲಿರುವ ಒಟ್ಟು ಇಂಗಾಲದ ಮಾನಾಕ್ಸೈಡಿನ ಜೊತೆ ರಕ್ತಬಣ್ಣಕದಲ್ಲಿ ಅರೆಪಾಲು ಇಂಗಾಲಾಮ್ಲ ರಕ್ತಬಣ್ಣಕವಾಗಿ ಬದಲಾಗಲು ಕೇವಲ 500 ಮಿಲೀ. ನಷ್ಟು ಇಂಗಾಲದ ಮಾನಾಕ್ಸೈಡು ಸಾಕು. ಉಸಿರಾಡುವ ಗಾಳಿಯಲ್ಲಿ ಇದು 0.1%ರಷ್ಟು ಕಡಿಮೆ ಪ್ರಮಾಣದಲ್ಲಿ ಇದ್ದರೂ ಸುಮಾರು ಒಂದು ತಾಸಿನೊಳಗೇ ಮೈಯಲ್ಲೂ ಇದೇ ಮಟ್ಟಕ್ಕೇರುತ್ತದೆ. ಇನ್ನೂ ಹೆಚ್ಚಿದ್ದರೆ (0.4%) ಮೈಯಲ್ಲೂ ಅಷ್ಟು ಸೇರಲು ಅರೆ ತಾಸೂ ಹಿಡಿಯದು. ಹಾಲ್ಡೇನನೂ ಅವರ ಒಂದಿಗರೂ ಇಂಗಾಲದ ಮಾನಾಕ್ಸೈಡ್ ಸೇವಿಸಿ ಪ್ರಯೋಗಗಳನ್ನು ಮಾಡಿ ಅದರ ವಿಷವೇರಿಕೆಯನ್ನು ಪರೀಕ್ಷಿಸಿರುವರು. ಆರಾಮದಲ್ಲಿದ್ದಾಗ ಮೈರಕ್ತದಲ್ಲಿರುವ ಒಟ್ಟು ರಕ್ತಬಣ್ಣಕದಲ್ಲಿ 20% ಇಂಗಾಲದ ಮಾನಾಕ್ಸೈಡ್ ಒಡಗೂಡಿದ್ದರೂ ತೊಂದರೆ ಏನೂ ಇಲ್ಲ. ಆದರೆ ದುಡಿಯುತ್ತಿರುವಾಗ ತುಸು ತೊಡಕಾಗುತ್ತವೆ. 30% ರಷ್ಟು ಹೀಗೆ ಕೆಟ್ಟಿದ್ದರೆ, ಕೆಲಸ ಮಾಡದೆ ಸುಮ್ಮನಿದ್ದರೂ ತಲೆನೋವು, ತತ್ತರಿಕೆ ಕಾಣಬರುತ್ತವೆ. 50% ರಷ್ಟು ಹೀಗೆ ಕೆಟ್ಟು ಕೆಲಸಕ್ಕೆ ಬಾರದಾಗಿದ್ದರೆ ಎದೆಯಲ್ಲಿ ಮಿಡಿತ, ನೋವು, ಸ್ನಾಯುಗಳ ದಣಿವೂ ಕಾಣಬರುತ್ತವೆ. ಹೀಗಿರುವಾಗ, ದಣಿವಾಗುವಂತೆ ದುಡಿದರೆ ಎಚ್ಚರ ತಪ್ಪಬಹುದು. ಎಚ್ಚರ ತಪ್ಪಿದವನನ್ನು ಒಳ್ಳೆಯ ಗಾಳಿಯ ಆವರಣಕ್ಕೆ ಒಯ್ದ ಮೇಲೂ 3-5 ದಿವಸಗಳ ತನಕ ಎಚ್ಚರಗೊಳ್ಳದೆ ಇರುವುದೂ ಉಂಟು. ಕೊನೆಗೆ 60-80% ರಕ್ತಬಣ್ಣಕದಲ್ಲಿ ಇಂಗಾಲದ ಮಾನಾಕ್ಸೈಡ್ ಒಡಗೊಡಿಬಿಟ್ಟಿದ್ದರೆ ಸಾಮಾನ್ಯವಾಗಿ ರೋಗಿ ಸಾಯುವನು. ಸತ್ತರೂ ಅನೇಕ ದಿವಸಗಳ ತನಕ ಮೈ ಕೆಡದೆ, ಕೊಳೆಯದೆ ಹಾಗೇ ಇರುತ್ತದೆ. ಅಷ್ಟು ದಿವಸಗಳು ಕಳೆದರೂ ಮೈಯಲ್ಲಿ ಈ ವಿಷಾನಿಲ ಇರುವುದನ್ನು ರಾಸಾಯನಿಕ ಪರೀಕ್ಷೆಗಳಿಂದ ಗುರುತಿಸಬಹುದು. ರಕ್ತದಲ್ಲಿ ಇದರ ಪ್ರಮಾಣವನ್ನು ಕರಾರುವಾಕ್ಕಾಗಿ ತೋರಿಸಲು, ರಿವರ್ಷನ್ ರೋಹಿತದರ್ಶಕವನ್ನು (ರಿವರ್ಷನ್ ಸ್ಪೆಕ್ಚ್ರಸ್ಕೋಪ್) ಹಾರ್ಟ್ರಿಡ್ಜ್ ಕಂಡುಹಿಡಿದಿದ್ದಾನೆ.
ಇಂಗಾಲದ ಮಾನಾಕ್ಸೈಡಿನ ವಿಷವೇರಿಕೆಯ ಮಟ್ಟವನ್ನು ಅಳೆಯಲು, ಉಸಿರಾಡುತ್ತಿರುವ ಗಾಳಿಯಲ್ಲಿನ ಇಂಗಾಲದ ಮಾನಾಕ್ಸೈಡ್ ಪ್ರಮಾಣ, ಸೇವನೆಯ ಹೊತ್ತು ಎರಡನ್ನೂ ಹೆಂಡರ್ಸನ್ ಮತ್ತು ಹ್ಯಾಗಾರ್ಡ್ ಗಣನೆಗೆ ತೆಗೆದುಕೊಂಡಿದ್ದಾರೆ. ಇವರ ಪ್ರಕಾರ ವಿಷಗಾಳಿ ಸೇವನೆಯ ಹೊತ್ತು (ತಾಸುಗಳಲ್ಲಿ), ಗಾಳಿಯಲ್ಲಿನ ಇಂಗಾಲದ ಮಾನಾಕ್ಸೈಡ್ ಪ್ರಮಾಣ (10 ಲಕ್ಷದಲ್ಲಿರುವ ಭಾಗ) ಇವುಗಳ ಗುಣಲಬ್ಧ 300 ಆಗಿದ್ದರೆ ಏನೂ ತೊಂದರೆ ಇರುವುದಿಲ್ಲ; 600 ಆಗಿದ್ದರೆ ತುಸು ತೊಂದರೆ; 900 ಆಗಿದ್ದರೆ ಗೊತ್ತಾಗುವಷ್ಟು ತೊಂದರೆಯಾಗುತ್ತದೆ; 1,500 ಅದಕ್ಕೂ ಮೀರಿದ ಗುಣಲಬ್ಧ ಬಂದರೆ ಎಚ್ಚರ ತಪ್ಪಬಹುದಾದ ಸ್ಥಿತಿ ಅಥವಾ ಪ್ರಾಣಾಪಾಯ ಎಂದೇ ತಿಳಿಯಬೇಕು.
ಇಂಗಾಲದ ಮಾನಾಕ್ಸೈಡ್ ವಿಷವೇರಿಕೆಗೆ ರಕ್ತದಲ್ಲಿ ಆಕ್ಸಿಜನ್ ಕೊರತೆಯೇ ಮುಖ್ಯ ಕಾರಣ. ಅಂದಮಾತ್ರಕ್ಕೆ ಈ ಅನಿಲ ರಕ್ತಬಣ್ಣಕದೊಡನೆ ಕೂಡಿಕೊಂಡು ಅದನ್ನು ಕೆಲಸಕ್ಕೆ ಬಾರದಂತೆ ಆಗಿಸುವುದರಿಂದ ಮಾತ್ರ ಈ ಕೊರತೆ ಒದಗುವುದಿಲ್ಲ. ಬೇರೆ ರೀತಿಯಿಂದಲೂ ರಕ್ತಬಣ್ಣಕವನ್ನು ಕೆಲಸಕ್ಕೆ ಬಾರದಂತೆ ಮಾಡಿದಾಗಲೂ ಇದು ಸಾಧ್ಯ. ಆದರೆ ಇಂಥಲ್ಲಿ ಅಪಾಯ ಮೊದಲಿನದಕ್ಕಿಂತ ಕಡಿಮೆ.
ಲಕ್ಷಣಗಳು
[ಬದಲಾಯಿಸಿ]ಇದರ ವಿಷವೇರಿಕೆಯ ಸೂಚನೆಗಳು ಸಾಮಾನ್ಯವಾಗಿ ಅಲಸಿಕೆ, ಜೋಗರಿಕೆ, ಇಂದ್ರಿಯಗಳ ಜಡತ್ವ, ಕೊನೆಗೆ ಸೆಳವು. ಇದಿಲ್ಲದಿದ್ದರೆ ತಲೆನೋವು, ಎದೆ ಮಿಡಿತ, ಉಸಿರು ಸಿಕ್ಕಿಕೊಂಡಂತಾಗುವಿಕೆ.[೩] ಜಾಗ ಬಿಟ್ಟು ಏಳಲೂ ಆಗದಷ್ಟು ಕೈಕಾಲುಗಳಲ್ಲಿ ನಿತ್ರಾಣ, ಕೊನೆಗೆ ಸೆಳವು.[೪] ಈ ಸೆಳವು ಜೋರಾಗಿರುವುದು. ಸಾಧಾರಣವಾಗಿ ತುಟಿ, ಕೆನ್ನೆಗಳು ತೊಂಡೆ ಹಣ್ಣಿನಂತೆ ಕೆಂಪಗಿರುತ್ತವೆ. ಆದರೆ ಕೆಲವೇಳೆ ಮೊಗ ಮಂಕಾಗಿ ಬಿಳಚಿಕೊಂಡು ಬೆವರು ಹನಿಗಳಿಂದ ಕೂಡಿರಲೂಬಹುದು. ನೆಟ್ಟ ನೋಟದ, ರೆಪ್ಪೆ ಬಡಿಯದ ತೆರೆದ ಕಣ್ಣುಗಳು, ವೇಗದುಸಿರಾಟ, ದುರ್ಬಲಗತಿಯ ನಾಡಿ, ತಣ್ಣ ಕೈಕಾಲುಗಳು ವಿಷವೇರಿಕೆಯ ಇತರ ಲಕ್ಷಣಗಳು.
ಚಿಕಿತ್ಸೆ
[ಬದಲಾಯಿಸಿ]ಇಂಗಾಲದ ಮಾನಾಕ್ಸೈಡ್ ವಿಷವೇರಿಕೆಯ ಚಿಕಿತ್ಸೆಯ ಪರಿಣಾಮ, ರೋಗಿಯ ರಕ್ತದಲ್ಲಿ ಅದು ಇರುವ ಪ್ರಮಾಣದಿಂದ ತಿಳಿಯಬಹುದು. ಇದು ಅಷ್ಟು ಮುಖ್ಯವಲ್ಲ. ರೋಗಿಯನ್ನು ಕೂಡಲೇ ಕೆಟ್ಟ ಗಾಳಿಯಿಂದ ಹೊರತೆಗೆದು ಒಳ್ಳೆಯ ಗಾಳಿಯ ಆವರಣಕ್ಕೆ ಸಾಗಿಸಿ, ಬೆಚ್ಚಗೆ ಹೊದ್ದಿಸಿ, ಮೈ ಕಾವೇರುವಂತೆ ಅಂಗೈ ಅಂಗಾಲು ತಿಕ್ಕಿ ತೀಡಿ, ಸಲೀಸಾಗಿ ಒಳ್ಳೆ ಗಾಳಿಯನ್ನೋ ಆಕ್ಸಿಜನ್ನನ್ನೋ ಸೇವಿಸುವ ಹಾಗೆ ಮಾಡುವುದೇ ಸಫಲ ಚಿಕಿತ್ಸೆಯ ತಿರುಳು. ಒಳ್ಳೆಯ ಗಾಳಿಗೆ ಒಡ್ಡಿದ ಕೂಡಲೇ ಅನೇಕವೇಳೆ ರೋಗಿ ಸ್ಥಿತಿ ಕೆಡಬಹುದು. ಕೆಟ್ಟ ಗಾಳಿಯ ಕೋಣೆಯಲ್ಲಿನ ಹೆಚ್ಚಿನ ಇಂಗಾಲದ ಡೈಆಕ್ಸೈಡ್, ರೋಗಿಯ ಉಸಿರಾಟವನ್ನು ಚೋದಿಸುತ್ತಿರುತ್ತದೆ. ಹೊರಗಿನ ಆವರಣದಲ್ಲಿ ಇಂಗಾಲದ ಡೈಆಕ್ಸೈಡ್ ಅಷ್ಟಿರದೆ ಉಸಿರಾಟದ ಚೋದನೆ ತಪ್ಪಿ ಹೀಗಾಗುತ್ತದೆ. ಇದಕ್ಕಾಗೇ ಕೃತಕ ಉಸಿರಾಟವನ್ನು ಕೈಗೊಂಡು ರೋಗಿಗೆ ಆಕ್ಸಿಜನ್ ಶೇ. 60ಕ್ಕಿಂತ ಹೆಚ್ಚಿರದ, ಇಂಗಾಲದ ಡೈಆಕ್ಸೈಡ್ ಸುಮಾರು ಶೇ.5 ರಷ್ಟಿರುವ ಗಾಳಿಯನ್ನು ಉಸಿರಾಡುವಂತೆ ಮಾಡಬೇಕಾಗುವುದು. ಹೀಗೆ ಮಾಡಿದಾಗ, ದೇಹದ ಒಳಹೋಗುವ ಹೆಚ್ಚಿನ ಆಕ್ಸಿಜನ್ ಕ್ರಮೇಣ ಹೆಚ್ಚು ಹೆಚ್ಚು ರಕ್ತಬಣ್ಣಕದ ಒಡಗೂಡಿ ಇಂಗಾಲದ ಮಾನಾಕ್ಸೈಡನ್ನು ಸ್ವಲ್ಪ ಸ್ವಲ್ಪವಾಗಿ ಹೊರದೂಡುತ್ತದೆ. ಮೈಯಿಂದ ಇಂಗಾಲದ ಮಾನಾಕ್ಸೈಡನ್ನು ಪೂರ್ತಿಯಾಗಿ ಹೊರಡಿಸಬೇಕಾದರೆ 5-6 ತಾಸುಗಳೇ ಹಿಡಿಯಬಹುದು. ಉಸಿರಾಟ ಚೋದಕ ಮದ್ದುಗಳನ್ನೂ ಕೊಡಬಹುದು. ಇಂಗಾಲದ ಮಾನಾಕ್ಸೈಡ್ ವಿಷವೇರಿಕೆ ಬಹಳ ಹೊತ್ತಿನದಾಗಿದ್ದರೆ, ಚಿಕಿತ್ಸೆಯಿಂದ ಪೂರ್ತಿ ಗುಣವಾಗುವ ನೆಚ್ಚಿಕೆ ಇಲ್ಲ. ಮಿದುಳಿನಲ್ಲಿ ಶಾಶ್ವತವಾಗಿ ಕೆಲವು ಕೆಡುಕುಗಳು ಉಳಿಯುತ್ತವೆ. ಮರವು, ತುಸು ಇಲ್ಲವೇ ಪೂರ್ಣ ಮನೋವಿಕಲತೆ, ಪಾರ್ಕಿನ್ಸನ್ ಬೇನೆ ಇವು ಹಾಗೇ ಉಳಿದು ಬಿಡಬಹುದು.[೫]
ಇಂಗಾಲದ ಮಾನಾಕ್ಸೈಡ್ ಬೇರೆ ತೆರನಾಗೂ ವಿಷವಾಗಬಹುದು. ರಕ್ತಬಣ್ಣಕಕ್ಕೆ ರಾಸಾಯನಿಕವಾಗಿ ಸಂಬಂಧಿಸಿದ, ಕಣಬಣ್ಣಕ (ಸೈಟೋಕ್ರೋಮು) ದೊಳೆಗಳು ಮೈಯಲ್ಲಿನ ಎಲ್ಲ ಜೀವಕಣಗಳಲ್ಲೂ ಇರುತ್ತವೆ. ಇವೂ ಕೂಡ ಇಂಗಾಲದ ಮಾನಾಕ್ಸೈಡ್ ಒಡಗೂಡಬಹುದು. ಹಾಗಾದಾಗ ರಕ್ತದಲ್ಲಿ ಆಕ್ಸಿಜನ್ ಬೇಕಾದಷ್ಟಿದ್ದರೂ ಜೀವಕಣಗಳು ಅದನ್ನು ಬಳಸಲಾರವು. ಆಗಲೂ ಜೀವಾಪಾಯ ಇದ್ದೇ ಇರುತ್ತದೆ. ಆದರೆ ಇದು ಯಾವಾಗಲೂ ಹೀಗಾಗುವಂತಿಲ್ಲ. ಹೀಗಾಗಬೇಕಾದರೆ, ಇಂಗಾಲದ ಮಾನಾಕ್ಸೈಡ್ ಸಾಮಾನ್ಯ ವಿಷವೇರಿಕೆಗಿಂತ ಸಾವಿರಪಟ್ಟು ಹೆಚ್ಚಿರಬೇಕು.
ಉಲ್ಲೇಖಗಳು
[ಬದಲಾಯಿಸಿ]- ↑ Schottke D (2016). Emergency Medical Responder: Your First Response in Emergency Care (in ಇಂಗ್ಲಿಷ್). Jones & Bartlett Learning. p. 224. ISBN 978-1284107272. Archived from the original on 10 September 2017. Retrieved 2 July 2017.
- ↑ Omaye ST (November 2002). "Metabolic modulation of carbon monoxide toxicity". Toxicology. 180 (2): 139–50. doi:10.1016/S0300-483X(02)00387-6. PMID 12324190.
- ↑ National Center for Environmental Health (30 December 2015). "Carbon Monoxide Poisoning – Frequently Asked Questions". www.cdc.gov (in ಅಮೆರಿಕನ್ ಇಂಗ್ಲಿಷ್). Archived from the original on 5 July 2017. Retrieved 2 July 2017.
- ↑ Guzman JA (October 2012). "Carbon monoxide poisoning". Critical Care Clinics. 28 (4): 537–48. doi:10.1016/j.ccc.2012.07.007. PMID 22998990.
- ↑ Bleecker ML (2015). "Carbon monoxide intoxication". Occupational Neurology. Handbook of Clinical Neurology. Vol. 131. pp. 191–203. doi:10.1016/B978-0-444-62627-1.00024-X. ISBN 978-0444626271. PMID 26563790.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Centers for Disease Control and Prevention (CDC) – Carbon Monoxide – NIOSH Workplace Safety and Health Topic
- International Programme on Chemical Safety (1999). Carbon Monoxide, Environmental Health Criteria 213, Geneva: WHO