ಇಸ್ರೇಲಿನ ಇತಿಹಾಸ
ದೇಶದ ಪ್ರಾಕ್ತನ ಶಾಸ್ತ್ರದ ಶಾಸ್ತ್ರೀಯವಾದ ಅಭ್ಯಾಸ ಆರಂಭವಾದದ್ದು 19ನೆಯ ಶತಮಾನದ ಮಧ್ಯಭಾಗದಲ್ಲಿ. ಆಗಿನಿಂದ ಈಗಿನ ವರೆಗೂ ಅನೇಕ ಪ್ರಾಕ್ತನ ಸಂಶೋಧನ ಸಂಸ್ಥೆಗಳೂ ಪ್ರಾಕ್ತನ ಶಾಸ್ತ್ರಜ್ಞರೂ ತೋರಿದ ವಿಶೇಷ ಆಸ್ಥೆಯ ಫಲವಾಗಿ ಹಲವಾರು ಉತ್ಖನನಗಳೂ ಸಂಶೋಧನೆಗಳೂ ನಡೆದು ಈಗ ಇಸ್ರೇಲಿನ ಪ್ರಾಚೀನ ಚರಿತ್ರೆಯ ಅನೇಕ ವಿವರಗಳು ತಿಳಿದು ಬಂದಿವೆ.
ಪ್ರಾಕ್ತನ ಚರಿತ್ರೆ
[ಬದಲಾಯಿಸಿ]ಹಳೆಯ ಶಿಲಾಯುಗಕ್ಕೆ ಸೇರಿದ ಅಬೆವಿಲಿಯನ್ ಮತ್ತು ಅಷೂಲಿಯನ್ ಹಂತದ ಕೈಗೊಡಲಿಗಳು ಇಲ್ಲಿ ದೊರಕಿರುವ ಅವಶೇಷಗಳಲ್ಲಿ ಅತ್ಯಂತ ಪ್ರಾಚೀನ. ಇವು ಸುಮಾರು 2,50,000 ವರ್ಷಗಳಿಂದಲೂ ಮೊದಲಿನವೆಂಬುದು ಅಭಿಪ್ರಾಯ. ಚಕ್ಕೆ ಕಲ್ಲಿನ ಆಯುಧಗಳ ತಯೇಷಿಯನ್ ಮತ್ತು ಮುಸ್ಟೀರಿಯನ್ ಸಂಸ್ಕೃತಿಗಳ ಅವಶೇಷಗಳನ್ನು ಮೌಂಟ್ ಕಾರ್ಮೆಲ್ ಪರ್ವತದ ಗುಹೆಗಳಲ್ಲಿ ಡರೊಥಿ ಗ್ಯಾರಡ್ ಎಂಬ ವಿದೂಷಿ ಕಂಡುಹಿಡಿದಳು. ಪಶ್ಚಾದುಷೋ ಮಾದರಿಯ (ನಿಯಾಂಡರ್ಥ ಲಾಯಿಡ್) ಮತ್ತು ಆಧುನಿಕ ಮಾನವ ವರ್ಗದ ಮಿಶ್ರಸಂತತಿಯ ಜನ ಈ ಸಂಸ್ಕೃತಿಯ ಕರ್ತೃಗಳಾಗಿದ್ದರೆಂಬುದು ಅವರ ಆಸ್ತಿಗಳ ಅವಶೇಷಗಳಿಂದ ಗೊತ್ತಾಗಿದೆ. ಹಳೆಯ ಶಿಲಾಯುಗದ ಅಂತ್ಯ ಶಿಲಾಯುಗಕ್ಕೆ ಸುಮಾರು 50,000 ವರ್ಷಗಳ ಆರಿಗ್ನೇಷಿಯನ್ ಸಂಸ್ಕøತಿಯ ಅವಶೇಷಗಳೂ ಅನಂತರ ಸುಮಾರು 20,000 ವರ್ಷಗಳ ಆಟ್ಲಿಟಿಯನ್ ಸಂಸ್ಕøತಿಯ ಅವಶೇಷಗಳೂ ಇಲ್ಲಿ ದೊರಕಿವೆ.ಮಧ್ಯ ಶಿಲಾಯುಗದ ಅವಶೇಷಗಳು ಮೊದಲು ವಾಡಿಎಲ್ ನಟೂಫ್ ಎಂಬಲ್ಲಿ ದೊರಕಿದುದರಿಂದ ಆ ಸಂಸ್ಕøತಿಗೆ ನಟೂಫಿಯನ್ ಎಂದು ಹೆಸರಾಯಿತು. ಇಸ್ರೇಲಿನ ಅನೇಕ ಪ್ರದೇಶಗಳಲ್ಲಿ ದೊರಕಿರುವ, ಸುಮಾರು ಕ್ರಿ. ಪೂ. 10,000-6,000 ಅವಧಿಗೆ ಸೇರಿರುವ ಈ ಸಂಸ್ಕøತಿಯ ಜನ ಆಹಾರ ಸಂಗ್ರಹಣ ದೆಸೆಯಿಂದ ಮುನ್ನಡೆದು ಆಹಾರೋತ್ಪಾದನೆಯನ್ನು ಮೊತ್ತಮೊದಲಿಗೆ ಪ್ರಾರಂಭಿಸಿದರು. ವ್ಯವಸಾಯ ಮಾಡಿ ಬೆಳೆಸಿದ ಪೈರುಗಳನ್ನು ಚಕಮಕಿಕಲ್ಲಿನ ಹಲ್ಲುಗಳಿದ್ದ ಕುಡುಗೋಲುಗಳಿಂದ ಕುಯ್ಯುತ್ತಿದ್ದುದೂ ದುಷ್ಟಪ್ರಾಣಿಗಳನ್ನು ಪಳಗಿಸಿ ಸಾಕುತ್ತಿದ್ದುದೂ ಈ ಜನರ ವಿಶಿಷ್ಟ ಸಾಧನೆಗಳು.
ನೂತನ ಶಿಲಾಯುಗ
[ಬದಲಾಯಿಸಿ]ನೂತನ ಶಿಲಾಯುಗದ ಅತ್ಯಂತ ಪ್ರಾಚೀನವಾದ ಮತ್ತು ವಿಶದವಾಗಿ ಸಂಶೋಧಿಸಲ್ಪಟ್ಟಿರುವ ನೆಲೆಗಳಲ್ಲಿ ಮುಖ್ಯವಾದ ಜೆರಿಕೊ ಈ ದೇಶದಲ್ಲಿವೆ. ಮೊತ್ತ ಮೊದಲಿಗೆ ಅಂಚುಗಳನ್ನು ನಯವಾಗಿಸಿದ ಕಲ್ಲಿನ ಆಯುಧಗಳನ್ನು ಉಪಯೋಗಿಸುತ್ತಿದ್ದ ಈ ಜನ ಕ್ರಿ. ಪೂ 6-5ನೆಯ ಸಹಸ್ರಮಾನಗಳಲ್ಲಿ ಬೃಹತ್ತಾದ ವರ್ತುಳಾಕಾರದ ಶಿಲಾ ಸಮಾಧಿಗಳಲ್ಲಿ ಸತ್ತವರನ್ನು ಹಿಡಿಯುತ್ತಿದ್ದರು. ಕ್ರಿ.ಪೂ. 5000ದ ಸುಮಾರಿನಲ್ಲಿ ಮಡಕೆಗಳ ಉಪಯೋಗವೂ ಕಲ್ಲಿನ ಗೋಡೆ ಕಂದಕಗಳಿಂದ ರಕ್ಷಿತವಾದ ಗ್ರಾಮೀಣ ಜೀವನವೂ ರೂಢಿಗೆ ಬಂದುವು. ಆಹಾರೋತ್ಪಾದನೆ, ಕೈಗಾರಿಕೆ, ವಾಣಿಜ್ಯ ಇವರ ಮುಖ್ಯ ಸಾಧನೆಗಳು.
ತಾಮ್ರ ಶಿಲಾಯುಗ
[ಬದಲಾಯಿಸಿ]ತಾಮ್ರ ಶಿಲಾಯುಗದ ಸಂಸ್ಕøತಿಯ ಅವಶೇಷಗಳು ಫಸ್ಸೂಲ್ ಎಂಬಲ್ಲಿ ಮೊದಲಿಗೆ ದೊರಕಿದರು ಅನಂತÀರ ಇತರ ಅನೇಕ ನೆಲೆಗಳಲ್ಲೂ ದೊರಕಿವೆ. ವಿವಿಧ ಹಂತಗಳಲ್ಲಿ ಬೆಳೆದು ಬಂದ ಈ ಸಂಸ್ಕøತಿ ಈಜಿಪ್ಟಿನಲ್ಲೂ ಕಂಡುಬಂದಿದೆ. ಇದು ಕ್ರಿ. ಪೂ. 3100ರ ಹೊತ್ತಿಗೆ ಕೊನೆಗೊಂಡಿತೆಂದು ಹೇಳಬಹುದು. ತಾಮ್ರದ ಉಪಯೋಗ ರೂಢಿಗೆ ಬಂದದ್ದರ ಗುರುತಾಗಿ ಈ ಲೋಹದ ಎರಡು ಕೊಡಲಿಗಳೂ ಮತ್ತೆ ಕೆಲವು ಅವಶೇಷಗಳೂ ದೊರಕಿವೆ. ಮಡಕೆಗಳ ಮೇಲೆ ವರ್ಣಚಿತ್ರ ಬಿಡಿಸುವ ರೂಢಿ ಈ ಕಾಲದಲ್ಲೇ ಆರಂಭವಾಯಿತು.
ಕಂಚಿನ ಯುಗ
[ಬದಲಾಯಿಸಿ]ಇಸ್ರೇಲಿನ ಕಂಚಿನ ಯುಗ ಕ್ರಿ. ಪೂ. 3000-1200ರಲ್ಲಿ ರೂಢಿಯಲ್ಲಿತ್ತು. ಆ ಕಾಲವನ್ನು ಕಂಚಿನಯುಗ ಆದಿ, ಮಧ್ಯ ಮತ್ತು ಅಂತ್ಯಕಾಲಗಳೆಂದು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಫಸ್ಸೂಲ್ ಮೈದಾನಪ್ರದೇಶದಲ್ಲಿರುವ ನೆಲೆ. ಪ್ಯಾಲಿಸ್ಟೈನಿನ ಈ ಕಾಲದ ಬಹು ಸಂಖ್ಯಾತ ನೆಲೆಗಳು ಬೆಟ್ಟಗಳ ಶಿಖರಗಳ ಮೇಲೂ ತಪ್ಪಲುಗಳಲ್ಲೂ ಇವೆ. ಮೆಗಡ್ಡೋ ಖಿರ್ಬೆಟ್-ಕೆರಕ್, ಲಚಿಪ್ ಮುಂತಾದ ಈ ಕಾಲದ ನೆಲೆಗಳಲ್ಲಿ ಚಕಮಕಿ ಕಲ್ಲಿನಾಯುಧಗಳ ಬಳಕೆಯೂ ಇತ್ತು. ಕೆಂಪು ಮತ್ತು ಕಪ್ಪು ಬಣ್ಣದ ಹೊಸ ಬಗೆಯ ಮಡಕೆಗಳು ಕ್ರಿ. ಪೂ. 2500 ಸುಮಾರಿಗೆ ಬಳಕೆಗೆ ಬಂದುವು. ಅದರ ನೆಲೆಗಳ ರಕ್ಷಣೆಗೆ ಕೋಟೆ ಕೊತ್ತಲುಗಳು ನಿರ್ಮಿತವಾದುವು.ಈ ಕಾಲದಲ್ಲಿ ನೆರೆಹೊರೆಯ ರಾಜ್ಯಗಳೊಂದಿಗೆ, ಮುಖ್ಯವಾಗಿ ಈಜಿಪ್ಟ್ ಸಿರಿಯ ಮೆಸೊಪೊಟೇಮಿಯಗಳೊಂದಿಗೆ, ಬಿರುಸಿನ ವ್ಯಾಪಾರ ಸಾಗಿತ್ತು. ಬ್ಯಾಬಿಲೋನಿಯನ್ನರ ಕೀಲಾಕಾರ (ಕ್ಯಾನಿಫಾರಂ) ಬರಹ ರೂಢಿಗೆ ಬಂತು. ಮೆಗಿಡ್ಡೊ ನೆಲೆಯಲ್ಲಿ ದೊರಕಿರುವ ಚಿನ್ನದ ಮತ್ತು ದಂತದ ವಸ್ತುಗಳು ಈ ಯುಗದ ಅಂತ್ಯದಲ್ಲಿ ನೆಲೆಸಿದ್ದ ಉನ್ನತ ಮಟ್ಟದ ಸಂಸ್ಕøತಿಯ ಪ್ರತೀಕಗಳು. ದಂತದ ವಸ್ತುಗಳ ಮೇಲೆ ಸಿಂಹವೇ ಮುಂತಾದ ಪ್ರಾಣಿಗಳ ಚಿತ್ರಗಳನ್ನು ಕೊರೆದಿದೆ. ಉತ್ಸವ ದೃಶ್ಯಗಳೂ ಹಲವು ಕಂಡುಬಂದಿವೆ. ಗೆಜೆರ್, ಜೆರೂಸಲೆಂ, ಲಚಿಷ್ ಮುಂತಾದೆಡೆಗಳಲ್ಲಿದ್ದಂತೆ ಮೆಗಿಡ್ಡೊದಲ್ಲಿ ಸಹ ಈ ಕಾಲದ ಒಂದು ಬೃಹತ್ತಾದ ನೀರಿನ ಕಾಲುವೆಯನ್ನು ಮನೆಗಳ ತಳಭಾಗದಲ್ಲಿ ನಿರ್ಮಿಸಿ ಬೆಟ್ಟದಿಂದ ಕುಡಿಯುವ ನೀರನ್ನು ಪೂರೈಸುತ್ತಿದ್ದರು. ಇದು ಕಂದಕದಂತೆ ನಗರವನ್ನು ಬಳಸಿದ್ದರಿಂದ ರಕ್ಷಣೆಯೂ ಒದಗಿತ್ತು. ಈಜಿಪ್ಟಿನಲ್ಲಿರುವ ಅಮರ್ನ ಪತ್ರಗಳಿಂದ ತಿಳಿದುಬರುವಂತೆ ಅನೇಕ ಸಣ್ಣಪುಟ್ಟ ರಾಜರು ಅಧಿಕಾರದಲ್ಲಿದ್ದುಕೊಂಡು ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದುದಲ್ಲದೆ ಈಜಿಪ್ಟ್ ಮೆಸೊಪೊಟೇಮಿಯ ಮತ್ತು ಅಸ್ಸೀರಿಯದ ರಾಜರುಗಳ ಪ್ರಭಾವಕ್ಕೊಳಪಟ್ಟಿದ್ದರು. ಕ್ರಿ. ಪೂ. 1200ರ ಸುಮಾರಿಗೆ ಈ ಪ್ರದೇಶದಲ್ಲಿ ಕಬ್ಬಿಣದ ಬಳಕೆ ಹಬ್ಬಿತು. ಸ್ವಲ್ಪ ಕಾಲಾನಂತರ ಇಸ್ರೇಲಿನ ಹೆಸರಿಗೆ ಕಾರಣರಾದ ಇಸ್ರೇಲಿಗಳು ಅಥವಾ ಹೀಬ್ರೂಗಳು ಈ ದೇಶಕ್ಕೆ ಪ್ರವೇಶಿಸಿದರು. ಇವರ ಕಾಲದಲ್ಲಿ ಜನಜೀವನರೀತಿ ಹೆಚ್ಚೇನೂ ಬದಲಾಗದಿದ್ದರೂ ಮುಖ್ಯವಾಗಿ ಹಿಟೈಟ್ ಸಾಮ್ರಾಜ್ಯದ ಪತನಾನಂತರ ಕಬ್ಬಿಣ ಲೋಹಗಾರಿಕೆ ಎಲ್ಲೆಡೆಯಲ್ಲೂ ಪ್ರಸರಿಸಲಾರಂಭಿಸಿತು. ಟೆಲ್-ಎಲ್-ಫುಲ್ ಎಂಬಲ್ಲಿನ ಭೂಉತ್ಖನನದಿಂದ ಗೊತ್ತಾಗಿರುವಂತೆ ಈ ಕಾಲದವರು ಸರಳ ಗ್ರಾಮೀಣ ಸಂಸ್ಕøತಿ. ಇವರು ಹೊಸರೀತಿಯ ಮತ್ತು ಆಕಾರದ ಮಡಕೆ ಕುಡಿಕೆಗಳನ್ನೂ ನೂಲುವ ತಕಲಿಗಳನ್ನೂ ಉಪಯೋಗಿಸುತ್ತಿದ್ದರು. ಈ ಕಾಲದಲ್ಲಿ ರಾಜಕೀಯ ಸಾಮಾಜಿಕ ಹಾಗೂ ಬೌದ್ಧಿಕ ಚಟುವಟಿಕೆಗಳು ನೆರೆಹೊರೆಯ ಜನಾಂಗಗಳಿಂದ ಪ್ರಭಾವಿತವಾಗಿ ಮುಂದುವರಿದವು. ಈ ಕಾಲದ ಬಹು ಮುಖ್ಯ ಸಾಧನೆಗಳೆಂದರೆ ನೆರೆಯ ಫಿಲಿಸ್ಟೈನರ ಪ್ರಭಾವದಿಂದ ಬಂದ ಅಕ್ಷರಪದ್ಧತಿಯ ಬರವಣಿಗೆಗೆ, ಮಸಿ ಮತ್ತು ಲೇಖನಿಯ ಉಪಯೋಗ. ಕ್ರಿ. ಪೂ. 8ನೆಯ ಶತಮಾನದ ಅಂತ್ಯದಲ್ಲಿ ಅಸ್ಸೀರಿಯನ್ನರಿಂದಲೂ 6ನೆಯ ಶತಮಾನದಲ್ಲಿ ಬ್ಯಾಬಿಲೋನಿಯನ್ನರಿಂದಲೂ ಪರ್ಷಿಯನ್ನರಿಂದಲೂ 4ನೆಯ ಶತಮಾನದಲ್ಲಿ ಗ್ರೀಕರಿಂದಲೂ ಇಸ್ರೇಲು ಪರಾಜಯಹೊಂದಿತು.(ಬಿ.ಕೆ.ಜಿ.)
ಈಚಿನ ಚರಿತ್ರೆ
[ಬದಲಾಯಿಸಿ]ಈಗ ಇಸ್ರೇಲ್ ಇರುವ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿ ಕೇನನ್ ಎಂಬ ಹೆಸರಿತ್ತು; ಅನಂತರ ಇದು ಪ್ಯಾಲೆಸ್ಟೈನ್ ಆಯಿತು. ಯೆಹೂದ್ಯರು ಈಜಿಪ್ಟನ್ನು ಬಿಟ್ಟು, ಸಿನಾಯ್ ಮರಳುಗಾಡುಗಳಲ್ಲಿ ಅಲೆದು, ಪ್ಯಾಲಿಸ್ಟೈನಿಗೆ ಬಂದು, ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಜನಾಂಗವಾಗಿ ಬಾಳಿದರು; ವಿಶ್ವದಲ್ಲೆ ಹೆಸರಾದ ಸಂಸ್ಕøತಿ ಬೆಳೆಸಿದರು. ಯೆಹೂದ್ಯ ಪ್ರವಾದಿಗಳು, ಪುರೋಹಿತರು, ಕವಿಗಳು, ದಾರ್ಶನಿಕರು ಬದುಕಿ ಗ್ರಂಥರಚನೆ ಮಾಡಿದ್ದು ಇಲ್ಲಿ.(ನೋಡಿಪ್ಯಾಲಸ್ತೀನ್)ಪ್ರಾಚೀನ ಇಸ್ರೇಲಿನಲ್ಲಿ ಮೊದಲು ರಾಜ್ಯ ಸ್ಥಾಪಿಸಿದವನು ಸಾಲ್. ಅವನ ತರುವಾಯ ರಾಜ್ಯವಾಳಿದ ಡೇವಿಡ್ ಈ ರಾಷ್ಟ್ರವನ್ನು ಬಲಪಡಿಸಿದ; ಜೆರೂಸಲೆಂ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ಮುಂದೆ ರಾಜ್ಯವಾಳಿದ ಸಾಲಮನ್ ತಾಮ್ರದ ಸ್ತಂಭಗಳಿದ್ದ ದೇವಸ್ಥಾನವನ್ನು ರಾಜಧಾನಿಯಲ್ಲಿ ಕಟ್ಟಿಸಿದ. ಆದರೆ ಮೇಲಿಂದ ಮೇಲೆ ನುಗ್ಗಿ ಬರುತ್ತಿದ್ದ ದಾಳಿಕಾರರು ಅನೇಕ ಸಲ ಈ ದೇಶವನ್ನು ಗೆದ್ದು ಆಳಿದರು. ಇಸ್ರೇಲ್ ಪಶ್ಚಿಮದ ಫಲವತ್ತಾದ ನೈಲ್ ನದೀ ಬಯಲಿನಲ್ಲೂ ಪೂರ್ವದಲ್ಲಿನ ಅಷ್ಟೇ ಫಲವತ್ತಾದ ಯೂಫ್ರೆಟೀಸ್ ನದೀ ಪ್ರದೇಶದಲ್ಲೂ ಇದ್ದ ಬಲಿಷ್ಠ ರಾಜ್ಯಗಳ ನಡುವಣ ಕಾಲ್ಚೆಂಡಾಯಿತು. ಅಸ್ಸೀರಿಯನ್ನರು, ಬ್ಯಾಬಿಲೋನಿಯನ್ನರು ಪರ್ಷಿಯನ್ನರು, ಗ್ರೀಕರು, ರೋಮನರು-ಹೀಗೆ ಒಬ್ಬರಾದ ಮೇಲೊಬ್ಬರು ಇಸ್ರೇಲನ್ನು ಗೆದ್ದು ಆಕ್ರಮಿಸಿದರು. ಮುಂದೆ ಇದು ಆಟೋಮನ್ ಸಾಮ್ರಾಜ್ಯದ ಭಾಗವಾಗಿದ್ದು, ಕೊನೆಗೆ ತುರ್ಕಿ ರಾಜ್ಯಕ್ಕೆ ಸೇರಿಹೋಯಿತು. ಈ ಆಕ್ರಮಣಗಳ ನಡುವೆ ಇಸ್ರೇಲ್ ಕೊಂಚ ಕಾಲ ಮಾತ್ರ ಸ್ವಾತಂತ್ರ್ಯ ಪಡೆದಿತ್ತು; ಉಳಿದ ಕಾಲಗಳಲ್ಲಿ, ಶತ್ರುಗಳು ದೇಶವನ್ನು ನಾಶಗೊಳಿಸುತ್ತಿದ್ದಾಗಲೂ ಯೆಹೂದ್ಯರ ತಾಯ್ನಾಡಿನ ಮಮತೆ ಕುಗ್ಗಲಿಲ್ಲ; ಗೋಳುಗೋಡೆಯ (ವೇಲಿಂಗ್ ವಾಲ್) ಎದುರು ನಿಂತು ಪರದಾಸ್ಯಕ್ಕಾಗಿ ಪ್ರಲಾಪಿಸಿ, ವಿಮೋಚನೆಗಾಗಿ ದೇವರಿಗೆ ಮೊರೆಯಿಡುತ್ತಿದ್ದರು.
ಯೆಹೂದ್ಯರಿಗೆ ಪ್ಯಾಲಿಸ್ಟೈನಿನಲ್ಲಿ ಒಂದು ನೆಲೆಗಾಗಿ ಹೋರಾಟ
[ಬದಲಾಯಿಸಿ]ಈ ಚಾರಿತ್ರಿಕ ಪರಿಸ್ಥಿತಿಗಳಿಂದಾಗಿ ಯೆಹೂದ್ಯರು ತಮ್ಮ ತಾಯ್ನಾಡನ್ನು ತೊರೆದು, ತಮ್ಮದೆಂದು ಹೇಳಿಕೊಳ್ಳುವ ದೇಶವಿಲ್ಲದೆ, ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಹರಡಿ ಹೋಗಬೇಕಾಯಿತು. ಶತಮಾನಗಳ ಕಾಲ ಅವರ ಈ ಸ್ಥಿತಿ ಮುಂದುವರೆಯಿತು. ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಯೆಹೂದ್ಯರು ತಮ್ಮದೇ ಆದ ಸ್ವಾಸ್ಥ್ಯವೊಂದರ ರಚನೆಗಾಗಿ ಚಳವಳಿ ಹೂಡಿದರು. ಆ ಚಳವಳಿಯ ಪ್ರವರ್ತಕ ಟೆಯೋಡೋರ್ ಹೆಟ್ರ್ಸಲ್. ಕ್ರೌರ್ಯಕ್ಕೆ ಗುರಿಯಾಗಿ ಹರಡಿ ಹಂಚಿಹೋಗಿದ್ದ ಯೆಹೂದ್ಯರಿಗೆ ಪ್ಯಾಲಿಸ್ಟೈನಿನಲ್ಲಿ ಒಂದು ನೆಲೆಯ ನಿರ್ಮಾಣವೇ ಈ ಚಳವಳಿಯ ಗುರಿ. ಸ್ವಪ್ರೇರಣೆಯಿಂದ ಹಿತೈಷಿಗಳು ಕೊಟ್ಟ ಹಣ, ರಾತ್‍ಚೈಲ್ಡ್ ನೀಡಿದ ಉದಾರ ಧನಸಹಾಯ ಇವುಗಳಿಂದ ಯೆಹೂದ್ಯ ರಾಷ್ಟ್ರೀಯ ಸಹಾಯನಿಧಿಯೊಂದು ನಿರ್ಮಿತವಾಯಿತು. ಇದರಿಂದ ಪ್ಯಾಲಿಸ್ಟೈನಿನಲ್ಲಿ ನೆಲೆಸಬಯಸಲು ಇಚ್ಛಿಸಿದವರಿಗೋಸ್ಕರ ಭೂಮಿಯನ್ನು ಕೊಳ್ಳಲನುಕೂಲವಾಯಿತು. ಈ ಅನುಕೂಲವನ್ನೊದಗಿಸುವುದಕ್ಕಾಗಿ 1908ರಲ್ಲಿ ಜಾಫದಲ್ಲಿ ಒಂದು ಯೆಹೂದ್ಯ ಸ್ವಾಸ್ಥ್ಯವಾದಿ ನಿಯೋಗ ರಚಿಸಲಾಯಿತು.
ಎರಡು ಮಹಾಯುದ್ಧಗಳ ಪರಿಣಾಮ
[ಬದಲಾಯಿಸಿ]1914ರಲ್ಲಿ ಪ್ರಾರಂಭವಾದ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಅನುಕೂಲ ಸಂದರ್ಭ ಒದಗಿತು. ಜರ್ಮನರ ಪಕ್ಷ ವಹಿಸಿದ್ದ ತುರ್ಕರು ಪ್ಯಾಲಿಸ್ಟೈನ್ ಆಕ್ರಮಿಸಿದರು. ಯೆಹೂದ್ಯರ ನೈತಿಕ ಬೆಂಬಲ ಗಳಿಸುವುದಕ್ಕಾಗಿ ಬ್ರಿಟಿಷ್ ಸರ್ಕಾರ ಯೆಹೂದ್ಯ ಸ್ವಾಸ್ಥ್ಯನೀತಿಗೆ ಮನ್ನಣೆ ಕೊಡುವುದಾಗಿ ತಿಳಿಯಪಡಿಸಿತು. ಈ ವಿಷಯವಾಗಿ ಮಿತ್ರರಾಷ್ಟ್ರಗಳೊಡನೆ ವಿಚಾರ ವಿನಿಮಯ ನಡೆಸಿದ ಮೇಲೆ 1917ರಲ್ಲಿ ಬ್ಯಾಲ್ಪುರ್ ಘೋಷಣೆ ಹೊರಬಂತು; ಅದರಲ್ಲಿ ಗ್ರೇಟ್ ಬ್ರಿಟನ್ ಮತ್ತು ಇತರ ಕೆಲವು ಮಿತ್ರರಾಷ್ಟ್ರಗಳು ಯೆಹೂದ್ಯರಿಗಾಗಿ ಪ್ಯಾಲಿಸ್ಟೈನಿನಲ್ಲಿ ಒಂದು ನೆಲೆಸುನಾಡನ್ನು ರಚಿಸುವ ಯೋಜನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದುವು. ಅರಬ್ ರಾಷ್ಟ್ರೀಯ ಮುಖಂಡರೂ ಇದನ್ನು ಸ್ವಾಗತಿಸಿದರು. 1919ರ ಜನವರಿ 3ರಂದು, ಪ್ಯಾರಿಸ್ ಶಾಂತಿ ಸಮ್ಮೇಳನದಲ್ಲಿ ಅರಬ್ ರಾಷ್ಟ್ರಗಳ ಪ್ರಧಾನ ನಿಯೋಗಿಯೂ ಇದನ್ನು ಒಪ್ಪಿದ. ಪ್ಯಾಲಿಸ್ಟೈನು ಬ್ರಿಟನ್ನಿನ ರಕ್ಷಿತ ಪ್ರದೇಶವಾಗಿರಬೇಕೆಂದು ಈ ಘೋಷಣೆಯಲ್ಲಿ ಸೂಚಿಸಲಾಗಿತ್ತು. ಇಲ್ಲಿ ಯೆಹೂದ್ಯರಿಗಾಗಿ ಒಂದು ಹೊಸ ರಾಜ್ಯ ನಿರ್ಮಿಸುವ ಜವಾಬ್ದಾರಿಯನ್ನು ಇಂಗ್ಲೆಂಡಿಗೆ ವಹಿಸಿಕೊಡಲಾಯಿತು. ರಾಷ್ಟ್ರಸಂಘದ (ಲೀಗ್ ಆಫ್ ನೇಷನ್ಸ್) ನಿರ್ಣಯದಂತೆ ಇದನ್ನು ಬ್ರಿಟನ್ನಿಗೆ ವಹಿಸಿಕೊಟ್ಟದ್ದು 1922ರಲ್ಲಿ.
ಅರಬ್ಬರ ಮತ್ತು ಯೆಹೂದ್ಯರ ಹಕ್ಕುಬಾಧ್ಯತೆ
[ಬದಲಾಯಿಸಿ]ಅರಬ್ಬರ ಮತ್ತು ಯೆಹ್ಯೂದರ ಹಕ್ಕುಬಾಧ್ಯತೆಗಳನ್ನು ಪರಿಗಣಿಸಿ ಅವುಗಳಿಗೆ ಅನುಸಾರವಾದ ರೀತಿಯಲ್ಲಿ ಇಬ್ಬರಿಗೂ ಸ್ವಾತಂತ್ರ್ಯ ಕೊಡುವ ವಿಷಯದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ಬ್ರಿಟಿಷ್ ಸರ್ಕಾರ ಹುಡುಕುತ್ತಿತ್ತು. ಅರಬ್ ಪ್ಯಾಲಿಸ್ಟೈನ್, ಯೆಹೂದ್ಯ ಪ್ಯಾಲಿಸ್ಟೈನ್ ಎಂಬುದಾಗಿ ಆ ಸಣ್ಣ ರಾಜ್ಯವನ್ನು ಇಬ್ಭಾಗ ಮಾಡುವ ಯೋಚನೆಯೂ ಇತ್ತು. ಆದರೆ ಇದಕ್ಕೆ ತೊಡಕುಗಳಿದ್ದುವು. ಅರಬ್ಬರ ಹಾಗೂ ಯೆಹೂದ್ಯರ ಎರಡು ಪ್ರಬಲ ಗುಂಪುಗಳು ಮೊದಲೇ ಯೋಚಿಸಿದಂತೆ ಸ್ಪಷ್ಟವಾಗಿ ಬೇರ್ಪಟ್ಟಿರಲಿಲ್ಲ. ಯೆಹೂದ್ಯರಿಗೆ ಅತ್ಯಂತ ಪವಿತ್ರಕ್ಷೇತ್ರವಾದ ಜೆರೂಸಲೆಂನಲ್ಲೇ ಬಹುಸಂಖ್ಯಾತ ಅರಬ್ಬರಿದ್ದರು. ಇದು ತಮ್ಮ ರಾಜ್ಯದಲ್ಲಿ ಸೇರಲೇಬೇಕೆಂದು ಯೆಹೂದ್ಯರ ಆಗ್ರಹ. ಅರಬ್ಬರು ಮಂಡಿಸಿದ ವಾದವೂ ನ್ಯಾಯವಾಗಿತ್ತು. ಪ್ರತ್ಯೇಕ ಇಸ್ರೇಲ್ ರಾಜ್ಯ ರಚನೆಗೆ ಅವರು ಅನೇಕ ಆಕ್ಷೇಪಣೆಗಳನ್ನೆತ್ತಿದರು. ಹೊಸ ರಾಜ್ಯ ರಚನೆಯ ಹಂಚಿಕೆಯಾದದ್ದು ರಾಜಕೀಯ ಒತ್ತಾಯದಿಂದ. ಅದು ಅರಬ್ ರಾಜ್ಯಗಳ ಕ್ಷೇಮ ಮುನ್ನಡೆಗಳನ್ನು ತಡೆಗಟ್ಟುವ ಕುಟಿಲ ಪ್ರಯತ್ನ. ಪ್ಯಾಲೆಸ್ಟೈನಿನ ಜನಸಂಖ್ಯೆಯಲ್ಲಿ ಶೇ. 90ರಷ್ಟು (ಹೊರದೇಶಗಳಿಂದ ಯೆಹೂದ್ಯರು ವಲಸೆ ಬರುವ ಮುನ್ನ) ಜನ ಅರಬ್ಬರೇ ಇದ್ದರು. ಏಳನೆಯ ಶತಮಾನದಲ್ಲಿ ಅದನ್ನು ರೋಮನ್ನರಿಂದ ವಶಪಡಿಸಿಕೊಂಡಾಗಿನಿಂದಲೂ ಅಲ್ಲಿ ಅರಬ್ಬರೇ ವಾಸಿಸುತ್ತಿದ್ದರು: ಈ ಅಸ್ವಾಭಾವಿಕ ಹಂಚಿಕೆಯಿಂದ ಅರಬ್ ಜನಾಂಗವನ್ನು ಇಬ್ಭಾಗಮಾಡಿದಂತಾಗುತ್ತದೆ; ಭಿನ್ನ ಭಿನ್ನ ರಾಷ್ಟ್ರಗಳಲ್ಲಿದ್ದ ಲಕ್ಷಾಂತರ ಯೆಹೂದ್ಯರು ವಲಸೆ ಬಂದದ್ದರಿಂದ ಈಗಾಗಲೇ ಎಷ್ಟೋ ಅರಬ್ಬರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ; ಮಧ್ಯ ಏಷ್ಯಕ್ಕೇ ಯೆಹೂದ್ಯರು ಅನ್ಯಜನರು. ಇದು ಅರಬ್ಬರ ವಾದ.
ಎರಡನೆಯ ಮಹಾಯುದ್ಧ
[ಬದಲಾಯಿಸಿ]ಆದರೆ ಈ ಮಧ್ಯೆ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಅರಬ್-ಯೆಹೂದ್ಯರ ಪ್ರಶ್ನೆ ಮುಂದಕ್ಕೆ ಹೋಯಿತು. 1940ರ ಮುಂದಿನ ವರ್ಷಗಳಲ್ಲಿ ಹಿಟ್ಲರನ ಉನ್ಮಾದಕ್ಕೆ ಅರವತ್ತು ಲಕ್ಷ ಯೆಹೂದ್ಯರು ಬಲಿಯಾದರು. ಆಧುನಿಕ ಮಾನವನ ಸಂಸ್ಕøತಿಗೆ ಬೆಲೆಯೇನಾದರೂ ಇದೆಯೆ? ಎಂದು ವಿಶ್ವಾದ್ಯಂತ ಜನ ಶಂಕಿಸುವಂತಾಯಿತು. ಯೆಹೂದ್ಯರನ್ನು ನಾಶಗೊಳಿಸಿ ಅವರ ಪ್ರಶ್ನೆಯನ್ನು ಬಗೆಹರಿಸುವುದು ಹಿಟ್ಲರನ ರೀತಿ.(ನೋಡಿ- ಹಿಟ್ಲರ್,-ಅಡಾಲ್ಫ್)ಪ್ಯಾಲಿಸ್ಟೈನಿನಲ್ಲಿ ತಮ್ಮ ರಾಷ್ಟ್ರೀಯ ನೆಲೆಯನ್ನೂರಿಸಬೇಕೆಂದು ಬಹುಕಾಲದಿಂದ ಆಸೆ ಹೊಂದಿದ್ದು, ಯುರೋಪಿನಿಂದ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಬಂದು ತುಂಬಿದ್ದ ಯೆಹೂದ್ಯರಿಗೂ ಅರಬ್ಬರಿಗೂ 1947ರಲ್ಲಿ ಯುದ್ಧವಾಯಿತು. ವಿಶ್ವಸಂಸ್ಥೆಯ ನಿರ್ಣಯಕ್ಕಾನುಸಾರವಾಗಿ ಅಲ್ಲಿ 1948ರ ಮೇ 14ರಂದು ಬ್ರಿಟಿಷರ ರಕ್ಷಣೆ ಕೊನೆಗೊಂಡು, ಮೇ 15ರಂದು ಪ್ಯಾಲಿಸ್ಟೈನಿನ ಉದಯವಾಯಿತು. ಅದು ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. 1949ರ ಜನವರಿಯ ವರೆಗೂ ಯುದ್ಧ ಮುಂದುವರೆಯಿತು. ಅರಬ್ ರಾಷ್ಟ್ರಗಳಿಗೂ ಇಸ್ರೇಲಿಗೂ ನಡುವೆ ಶಾಂತಿ ಕೌಲಿನ ಸಹಿಯಾಗಿಲ್ಲ; ರಾಜತಾಂತ್ರಿಕ ಸಂಬಂಧವಿಲ್ಲ. ವಿಶ್ವಸಂಸ್ಥೆ ನೇಮಿಸಿರುವ ಯುದ್ಧ ವಿರಾಮ ಮೇಲ್ವಿಚಾರಣಾ ವ್ಯವಸ್ಥೆ ಮುಂದುವರಿಯುತ್ತಿದೆ. 1967ರಲ್ಲಿ ಇಸ್ರೇಲಿಗೂ ನೆರೆಯ ಅರಬ್ ರಾಜ್ಯಗಳಿಗೂ ನಡುವೆ ನಡೆದ ಆರು ದಿನಗಳ ಯುದ್ಧದ ಫಲವಾಗಿ ಇಡೀ ಜೆರೂಸಲೆಂ, ಜಾರ್ಡನೆ ನದಿಯ ಪಶ್ಚಿಮ ದಂಡೆಯ ಪ್ರದೇಶ. ಸಿನಾಯ್ ಪರ್ಯಾಯದ್ವೀಪ ಮತ್ತು ಗೋಲನ್ ದಿಬ್ಬಗಳು ಇಸ್ರೇಲಿನ ವಶವಾದುವು. ಜೆರೂಸಲೆಂ ಅನ್ನು ಇಸ್ರೇಲ್ ರಾಜ್ಯದಲ್ಲಿ ತಕ್ಷಣವೇ ವಿಲೀನಗೊಳಿಸಲಾಯಿತು. ಉಳಿದ ಪ್ರದೇಶಗಳು ಇನ್ನೂ ಆಕ್ರಮಿತ ಪ್ರದೇಶಗಳಾಗಿ ಮುಂದುವರಿಯುತ್ತಿವೆ.(ಆರ್.ಟಿ.ಎಸ್.; ಕೆ.ಜಿ.)[೧][೨]
ನಂತರದ ಬೆಳವಣಿಗೆಗಳು
[ಬದಲಾಯಿಸಿ]ಓಸ್ಲೊ ಒಪ್ಪಂದ
[ಬದಲಾಯಿಸಿ]- ಜುಲೈ 25, 1993 ರಂದು, ಇಸ್ರೇಲ್ ಹಿಜ್ಬುಲ್ಲಾ ಸ್ಥಾನಗಳ ಮೇಲೆ ದಾಳಿ ಮಾಡಲು ಲೆಬನಾನ್‌ನಲ್ಲಿ ಒಂದು ವಾರದ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತು. 13 ಸೆಪ್ಟೆಂಬರ್ 1993 ರಂದು, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ) ಶ್ವೇತಭವನದ ದಕ್ಷಿಣ ಹುಲ್ಲುಹಾಸಿನ ಮೇಲೆ ಓಸ್ಲೋ ಒಪ್ಪಂದಗಳಿಗೆ (ತತ್ವಗಳ ಘೋಷಣೆ) ಸಹಿ ಹಾಕಿತು. ಪರಸ್ಪರ ಮಾನ್ಯತೆಗೆ ಬದಲಾಗಿ, ಪ್ಯಾಲೇಸ್ಟಿನಿಯನ್ ರಾಜ್ಯವನ್ನು ಸ್ಥಾಪಿಸುವ ಅಂತಿಮ ಒಪ್ಪಂದದ ಮುನ್ನುಡಿಯಾಗಿ, ತತ್ವಗಳು ಇಸ್ರೇಲ್‌ನಿಂದ ಮಧ್ಯಂತರ ಪ್ಯಾಲೇಸ್ಟಿನಿಯನ್ ಪ್ರಾಧಿಕಾರಕ್ಕೆ ವರ್ಗಾವಣೆಗೆ ಸಂಬಂಧಿಸಿದ ಉದ್ದೇಶಗಳನ್ನು ಸ್ಥಾಪಿಸಿದವು.[೩]
ಇಸ್ರೇಲ್-ಜೋರ್ಡಾನ್ ಶಾಂತಿ ಒಪ್ಪಂದ
[ಬದಲಾಯಿಸಿ]- ಇಸ್ರೇಲ್ ಮತ್ತು ಪಿಎಲ್ಒ ಮೇ 1994 ರಲ್ಲಿ ಗಾಜಾ-ಜೆರಿಕೊ ಒಪ್ಪಂದಕ್ಕೆ ಸಹಿ ಹಾಕಿತು ಮತ್ತು ಆಗಸ್ಟ್ನಲ್ಲಿ ಅಧಿಕಾರ ಮತ್ತು ಜವಾಬ್ದಾರಿಗಳ ಪೂರ್ವಸಿದ್ಧತಾ ವರ್ಗಾವಣೆಯ ಒಪ್ಪಂದಕ್ಕೆ ಇಸ್ರೇಲ್ನಿಂದ ಪ್ಯಾಲೆಸ್ಟೀನಿಯಾದವರಿಗೆ ಅಧಿಕಾರವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಜುಲೈ 25, 1994 ರಂದು, ಜೋರ್ಡಾನ್ ಮತ್ತು ಇಸ್ರೇಲ್ ವಾಷಿಂಗ್ಟನ್ ಘೋಷಣೆಗೆ ಸಹಿ ಹಾಕಿದವು, ಇದು 1948 ರಿಂದ ಅಸ್ತಿತ್ವದಲ್ಲಿದ್ದ ಯುದ್ಧದ ಸ್ಥಿತಿಯನ್ನು ಪಚಾರಿಕವಾಗಿ ಕೊನೆಗೊಳಿಸಿತು ಮತ್ತು ಅಕ್ಟೋಬರ್ 26 ರಂದು ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಸಾಕ್ಷಿಯಾದ ಇಸ್ರೇಲ್-ಜೋರ್ಡಾನ್ ಶಾಂತಿ ಒಪ್ಪಂದ ನೆರವೇರಿತು.[೪]
ಇಸ್ರೇಲಿ-ಪ್ಯಾಲೇಸ್ಟಿನಿಯನ್ ಮಧ್ಯಂತರ ಒಪ್ಪಂದ
[ಬದಲಾಯಿಸಿ]- ಪ್ರಧಾನಿ ಯಿತ್ಜಾಕ್ ರಾಬಿನ್ ಮತ್ತು ಪಿಎಲ್ಒ ಅಧ್ಯಕ್ಷ ಯಾಸರ್ ಅರಾಫತ್ ಅವರು ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯ ಮೇಲೆ ಇಸ್ರೇಲಿ-ಪ್ಯಾಲೇಸ್ಟಿನಿಯನ್ ಮಧ್ಯಂತರ ಒಪ್ಪಂದಕ್ಕೆ ಸೆಪ್ಟೆಂಬರ್ 28, 1995 ರಂದು ವಾಷಿಂಗ್ಟನ್‌ನಲ್ಲಿ ಸಹಿ ಹಾಕಿದರು. ಈ ಒಪ್ಪಂದಕ್ಕೆ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾ, ಈಜಿಪ್ಟ್, ನಾರ್ವೆ ಮತ್ತು ಯುರೋಪಿಯನ್ ಯೂನಿಯನ್ ಪರವಾಗಿ ಸಾಕ್ಷಿಯಾದರು ಮತ್ತು ಹಿಂದಿನ ಒಪ್ಪಂದಗಳನ್ನು ಸಂಯೋಜಿಸಿ ರದ್ದುಗೊಳಿಸಿದರು, ಇದು ಇಸ್ರೇಲ್ ಮತ್ತು ಪಿಎಲ್ಒ ನಡುವಿನ ಮೊದಲ ಹಂತದ ಮಾತುಕತೆಗಳ ತೀರ್ಮಾನವನ್ನು ಸೂಚಿಸುತ್ತದೆ. ಈ ಒಪ್ಪಂದವು ಪಿಎಲ್ಒ ನಾಯಕತ್ವವನ್ನು ಆಕ್ರಮಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಅಂತಿಮ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಮಾತುಕತೆಗಳೊಂದಿಗೆ ಪ್ಯಾಲೆಸ್ಟೀನಿಯಾದವರಿಗೆ ಸ್ವಾಯತ್ತತೆಯನ್ನು ನೀಡಿತು. ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ತೀನಿಯರು ಭಯೋತ್ಪಾದನೆಯ ಬಳಕೆಯನ್ನು ತ್ಯಜಿಸುವುದಾಗಿ ಭರವಸೆ ನೀಡಿದರು ಮತ್ತು ಪ್ಯಾಲೇಸ್ಟಿನಿಯನ್ ರಾಷ್ಟ್ರೀಯ ಒಪ್ಪಂದವನ್ನು ಬದಲಾಯಿಸಿದರು, ಇದು 1917 ರ ನಂತರ ವಲಸೆ ಬಂದ ಎಲ್ಲ ಯಹೂದಿಗಳನ್ನು ಗಡಿಪಾರು ಮಾಡಲು ಮತ್ತು ಇಸ್ರೇಲ್ ಅನ್ನು ನಿರ್ಮೂಲನೆ ಮಾಡಲು ಕರೆ ನೀಡಿತ್ತು.[೫]
ಲೆಬನಾನ್‌ನಿಂದ- ಇಸ್ರೇಲ್ ವಾಪಾಸು
[ಬದಲಾಯಿಸಿ]- ಮೇ 25, 2000 ರಂದು, ಇಸ್ರೇಲ್ ತನ್ನ ಉಳಿದ ಪಡೆಗಳನ್ನು ದಕ್ಷಿಣ ಲೆಬನಾನ್‌ನ "ಭದ್ರತಾ ವಲಯ" ದಿಂದ ಹಿಂತೆಗೆದುಕೊಂಡಿತು. ದಕ್ಷಿಣ ಲೆಬನಾನ್ ಸೈನ್ಯದ ಹಲವಾರು ಸಾವಿರ ಸದಸ್ಯರು (ಮತ್ತು ಅವರ ಕುಟುಂಬಗಳು) ಇಸ್ರೇಲಿಗರೊಂದಿಗೆ ಹೊರಟರು. ಯುಎನ್ ಸೆಕ್ರೆಟರಿ ಜನರಲ್ ರೆಸಲ್ಯೂಶನ್ 425 ರ ಪ್ರಕಾರ, ಜೂನ್ 16, 2000 ರ ಹೊತ್ತಿಗೆ, ಇಸ್ರೇಲ್ ತನ್ನ ಪಡೆಗಳನ್ನು ಲೆಬನಾನ್‌ನಿಂದ ಹಿಂತೆಗೆದುಕೊಂಡಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ತೀರ್ಮಾನಿಸಿದರು. ಇಸ್ರೇಲ್ ಲೆಬನಾನ್ ಪ್ರದೇಶವನ್ನು "ಶೆಬಾ ಫಾರ್ಮ್ಸ್" ( ಆದಾಗ್ಯೂ ಈ ಪ್ರದೇಶವನ್ನು 1967 ರವರೆಗೆ ಇಸ್ರೇಲ್ ಹಿಡಿತ ಸಾಧಿಸುವವರೆಗೂ ಸಿರಿಯಾ ಆಡಳಿತ ನಡೆಸಿತು). [೬]
ಜೆರುಸಲೆಮ್ ಇಸ್ರೇಲಿನ ರಾಜಧಾನಿಯಾಗಿ ಘೋಷಣೆ- ಟ್ರಂಪ್
[ಬದಲಾಯಿಸಿ]- 6 ಡಿಸೆಂಬರ್ 2017 ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೆಮ್ ಅನ್ನು ಇಸ್ರೇಲಿನ ರಾಜಧಾನಿಯಾಗಿ ಮಾನ್ಯತೆಯನ್ನು ಘೋಷಿಸಿದರು. ಮತ್ತು ಅಮೆರಿಕದ ರಾಯಭಾರ ಕಚೇರಿಯನ್ನು ಇದುವರೆಗಿನ ರಾಜಧಾನಿ "ಟೆಲ್ ಅವೀವ್" ನಿಂದ ದ ಜೆರುಸಲೆಮ್ಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ. ಇದರ ನಂತರ ಯುನೈಟೆಡ್ ಸ್ಟೇಟ್ಸ್, 25 ಮಾರ್ಚ್ 2019 ರಂದು ಇಸ್ರೇಲ್‍ನ ಭಾಗವಾಗಿ ಗೋಲನ್ ಹೈಟ್ಸ್ ಅನ್ನು ಗುರುತಿಸಿತು. ಮಾರ್ಚ್ 2018 ರಲ್ಲಿ ಪ್ಯಾಲೆಸ್ಟೀನಿಯನ್ನರು ಗಾಜಾದಲ್ಲಿ "ಗ್ರೇಟ್ ಮಾರ್ಚ್ ಆಫ್ ರಿಟರ್ನ್" ಅನ್ನು ಗಾಜಾ-ಇಸ್ರೇಲ್ ಗಡಿಯಲ್ಲಿ ಸಾಪ್ತಾಹಿಕ ಪ್ರತಿಭಟನೆಗಳ ಸರಣಿಯನ್ನು ಪ್ರಾರಂಭಿಸಿತು. [೭][೮]
ಇಸ್ರೇಲ್ ಚುನಾವಣೆ ಮತ್ತು ಸರ್ಕಾರ
[ಬದಲಾಯಿಸಿ]ನೋಡಿ
[ಬದಲಾಯಿಸಿ]ಹೆಚ್ಚಿನ ಓದಿಗೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಸ್ರೇಲಿನ ಇತಿಹಾಸ
- ↑ Israel;HISTORY.COM EDITORS; MAY 14, 2019ORIGINAL-JUN 30, 2017
- ↑ [Declaration of Principles on Interim Self-Government Arrangements Archived 2 March 2017 at the Wayback Machine Jewish Virtual Library]
- ↑ Treaty of Peace between The Hashemite Kingdom of Jordan and The State of Israel King Hussein website
- ↑ PLO Covenant (Charter) 1968". www.mideastweb.org.208
- ↑ [Kaufman, Asher (Autumn 2002). "Who owns the Shebaa Farms? Chronicle of a territorial dispute". Middle East Journal (Middle East Institute) 56 (4): 576–596.]
- ↑ [Proclamation 9683 of 6 December 2017, 82 FR 58331]
- ↑ Gaza protests: Thousands mark 'Great Return' anniversary;30 March 2019