ವಿಷಯಕ್ಕೆ ಹೋಗು

ಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಡಿಗಳು ಸರ್ಕಾರಗಳು, ಸಾರ್ವಭೌಮ ರಾಜ್ಯಗಳು, ಸಂಯುಕ್ತ ರಾಜ್ಯಗಳು, ಮತ್ತು ಇತರ ಉಪರಾಷ್ಟ್ರೀಯ ಘಟಕಗಳಂತಹ ರಾಜಕೀಯ ಘಟಕಗಳು ಅಥವಾ ಕಾನೂನು ವ್ಯಾಪ್ತಿಗಳ ಭೌಗೋಳಿಕ ಎಲ್ಲೆಗಳಾಗಿರುತ್ತವೆ. ಈ ಪ್ರದೇಶಗಳನ್ನು ನಿಯಂತ್ರಿಸುವ ರಾಜಕೀಯ ಅಥವಾ ಸಾಮಾಜಿಕ ಘಟಕಗಳ ನಡುವಿನ ಒಪ್ಪಂದಗಳ ಮೂಲಕ ಗಡಿಗಳನ್ನು ಸ್ಥಾಪಿಸಲಾಗುತ್ತದೆ; ಈ ಒಪ್ಪಂದಗಳ ಸೃಷ್ಟಿಯನ್ನು ಸೀಮಾ ನಿರ್ಣಯ ಎಂದು ಕರೆಯಲಾಗುತ್ತದೆ.

ರಾಜ್ಯದ ಆಂತರಿಕ ಆಡಳಿತ ಗಡಿ, ಷೆಂಗನ್ ಪ್ರದೇಶದೊಳಗಿನ ಅಂತರರಾಜ್ಯ ಗಡಿಗಳಂತಹ ಕೆಲವು ಗಡಿಗಳು ಹಲವುವೇಳೆ ಮುಕ್ತ ಮತ್ತು ಸಂಪೂರ್ಣವಾಗಿ ಅರಕ್ಷಿತವಾಗಿರುತ್ತವೆ. ಇತರ ಗಡಿಗಳು ಭಾಗಶಃ ಅಥವಾ ಸಂಪೂರ್ಣವಾಗಿ ನಿಯಂತ್ರಿತವಾಗಿರುತ್ತವೆ. ಇವನ್ನು ಗೊತ್ತುಪಡಿಸಿದ ಗಡಿ ತಪಾಸಣಾ ಸ್ಥಳಗಳಲ್ಲಿ ಮಾತ್ರ ಕಾನೂನಾತ್ಮಕವಾಗಿ ದಾಟಬಹುದು ಮತ್ತು ಗಡಿ ವಲಯಗಳು ನಿಯಂತ್ರಿತವಾಗಿರಬಹುದು. ಗಡಿಗಳು ಮಧ್ಯಸ್ಥ ವಲಯಗಳ ಸ್ಥಾಪನೆಯನ್ನೂ ಪ್ರೋತ್ಸಾಹಿಸಬಹುದು.

ಹಿಂದೆ, ಅನೇಕ ಗಡಿಗಳು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದ ರೇಖೆಗಳಾಗಿರಲಿಲ್ಲ; ಬದಲಾಗಿ ಹಲವುವೇಳೆ ನಡು ಪ್ರದೇಶಗಳು ಇರುತ್ತಿದ್ದವು. ಇವುಗಳ ಮೇಲೆ ಎರಡೂ ಕಡೆಯವರು ಹಕ್ಕು ಸಾಧಿಸುತ್ತಿದ್ದರು ಮತ್ತು ಇವುಗಳಿಗಾಗಿ ಕಾಳಗ ಮಾಡುತ್ತಿದ್ದರು. ಇವನ್ನು ಕೆಲವೊಮ್ಮೆ ಗಡಿನಾಡುಗಳು ಎಂದು ಕರೆಯಲಾಗುತ್ತಿತ್ತು. ೧೯೨೨ರಿಂದ ೧೯೮೧ರವರೆಗೆ ಸೌದಿ ಅರೇಬಿಯಾ-ಇರಾಕ್ ತಟಸ್ಥ ವಲಯ ಮತ್ತು ೧೯೨೨ರಿಂದ ೧೯೭೦ರವರೆಗೆ ಸೌದಿ-ಕುವೇಟಿ ತಟಸ್ಥ ವಲಯಗಳು ಆಧುನಿಕ ಕಾಲದಲ್ಲಿನ ವಿಶೇಷ ಉದಾಹರಣೆಗಳಾಗಿದ್ದವು. ಆಧುನಿಕ ಕಾಲದಲ್ಲಿ, ಗಡಿನಾಡುಗಳ ಬದಲಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಮತ್ತು ಗುರುತಿಸಲಾದ ಗಡಿಗಳಿರುತ್ತವೆ. ಗಡಿ ನಿಯಂತ್ರಣದ ಉದ್ದೇಶಗಳಿಗಾಗಿ, ವಿಮಾನ ನಿಲ್ದಾಣಗಳು ಮತ್ತು ರೇವುಗಳನ್ನು ಕೂಡ ಗಡಿಗಳು ಎಂದು ವರ್ಗೀಕರಿಸಲಾಗುತ್ತದೆ. ಬಹುತೇಕ ದೇಶಗಳು ದೇಶದ ಒಳಗೆ ಹಾಗೂ ಹೊರಗೆ ಜನರು, ಪ್ರಾಣಿಗಳು, ಮತ್ತು ಸರಕುಗಳ ಚಲನೆಯನ್ನು ನಿಯಂತ್ರಿಸಲು ಅಥವಾ ಸೀಮಿತಗೊಳಿಸಲು ಯಾವುದೋ ರೂಪದ ಗಡಿ ನಿಯಂತ್ರಣವನ್ನು ಹೊಂದಿರುತ್ತವೆ. ಅಂತರರಾಷ್ಟ್ರೀಯ ಕಾನುನಿನಡಿಯಲ್ಲಿ, ಪ್ರತಿ ದೇಶಕ್ಕೆ ಸಾಮಾನ್ಯವಾಗಿ ತನ್ನ ಗಡಿಗಳನ್ನು ದಾಟಲು ಪೂರೈಸಬೇಕಾದ, ಮತ್ತು ಈ ಕಟ್ಟಳೆಗಳನ್ನು ಉಲ್ಲಂಘಿಸಿ ಜನರು ತನ್ನ ಗಡಿಗಳು ದಾಟುವುದನ್ನು ತಡೆಯಲು ಬೇಕಾದ ಷರತ್ತುಗಳು/ಶಾಸನ ರಚಿಸಲು ಅನುಮತಿಯಿರುತ್ತದೆ.

ಕೆಲವು ಗಡಿಗಳನ್ನು ದಾಟಲು ಜನರು ಪಾಸ್‍ಪೋರ್ಟ್ಗಳು ಮತ್ತು ವೀಸಾಗಳಂತಹ ಕಾನೂನಾತ್ಮಕ ದಾಖಲೆಗಳನ್ನು, ಅಥವಾ ಇತರ ಗುರುತಿನ ದಸ್ತಾವೇಜುಗಳನ್ನು ಪ್ರಸ್ತುತಪಡಿಸುವುದು ಅಗತ್ಯವಿರುತ್ತದೆ. ಒಂದು ದೇಶದ ಗಡಿಯೊಳಗೆ ವಾಸಿಸಲು ಅಥವಾ ಕೆಲಸ ಮಾಡಲು ವಿದೇಶಿಯರಿಗೆ ವಿಶೇಷ ಒಳವಲಸೆ ದಸ್ತಾವೇಜುಗಳು ಅಥವಾ ಪರವಾನಗಿಗಳ ಅಗತ್ಯವಿರಬಹುದು; ಆದರೆ ಅಂತಹ ದಸ್ತಾವೇಜುಗಳನ್ನು ಹೊಂದಿರುವುದು ಆ ವ್ಯಕ್ತಿಗೆ ಗಡಿಯನ್ನು ದಾಟಲು ಅನುಮತಿ ಸಿಗುತ್ತದೆ ಎಂದು ಖಾತರಿಪಡಿಸುವುದಿಲ್ಲ.