ವಿಷಯಕ್ಕೆ ಹೋಗು

ಚಾರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರಣವು ಒಂದು ಹವ್ಯಾಸವಾಗಿದ್ದು ಇದರಲ್ಲಿ ಬೆಟ್ಟ-ಗುಡ್ಡ ಹತ್ತುವುದು, ನದಿಪಾತ್ರಗಳಲ್ಲಿ ನಡೆಯುವುದು, ಕಾಡುಗಳಲ್ಲಿ ಸಂಚರಿಸುವುದು ಮತ್ತು ರಾತ್ರಿ ವೇಳೆಯಲ್ಲಿ ತಂಗುವುದು ಮುಂತಾದುವುಗಳನ್ನು ಒಳಗೊಂಡಿದೆ. ಪ್ರಕೃತಿಯ ಚೆಲುವನ್ನು ಸವಿಯಲು ಇದು ಒಂದು ಉತ್ತಮ ಅವಕಾಶ. ಚಾರಣವು ಧೈರ್ಯ, ಸಾಹಸ, ಆತ್ಮ ಸ್ಥೈರ್ಯ, ನಾಯಕತ್ವ, ಸಂಘ ಶಕ್ತಿ, ಸೂಕ್ತ ಯೋಜನೆ, ಮಾನಸಿಕ ಸ್ಥಿತಿ ಮುಂತಾದವುಗಳನ್ನು ಬೆಳೆಸುವಲ್ಲಿ ಮತ್ತು ಅವುಗಳನ್ನು ಓರೆಗಲ್ಲಿಗೆ ಹಚ್ಚುವ ಒಂದು ಉತ್ತಮ ಹವ್ಯಾಸ. ಚಾರಣದಿಂದ ಆರಂಭವಾಗುವ ಈ ಆರೋಗ್ಯಕರ ಚಟುವಟಿಕೆಯು, ಹೆಚ್ಚಿನ ಶ್ರಮದ ಕ್ರೀಡೆಯಾದ ಪರ್ವತಾರೋಹಣಕ್ಕೂ ನಾಂದಿ ಹಾಡುವ ಸಾಧ್ಯತೆ ಇದೆ. ಖ್ಯಾತ ಪರ್ವತಾರೋಹಿಗಳು ಚಾರಣದಿಂದಲೇ ತಮ್ಮ ಈ ಹವ್ಯಾಸವನ್ನು ಆರಂಭಿಸಿದ್ದು ಗೊತ್ತಾಗುತ್ತದೆ.

ತಯಾರಿ

[ಬದಲಾಯಿಸಿ]

ಯಾವುದೇ ಚಾರಣವನ್ನು ಪ್ರಾರಂಭಿಸುವ ಮೊದಲು ಆ ಸ್ಥಳದ ಬಗ್ಗೆ ಮೊದಲು ಮಾಹಿತಿ ಕಲೆ ಹಾಕಬೇಕಾಗುತ್ತದೆ. ನಂತರ ಚಾರಣದಲ್ಲಿ ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಊಟ ಮತ್ತು ಮಲಗುವ ವ್ಯವಸ್ಥೆ ಬಗ್ಗೆ ಯೋಜಿಸಬೇಕಾಗುತ್ತದೆ. ಮುಖ್ಯವಾಗಿ ಚಾರಣದ ಹಾದಿಯಲ್ಲಿ ನೀರಿನ ಲಭ್ಯತೆಯನ್ನು ಮೊದಲೆ ತಿಳಿದುಕೊಳ್ಳಬೇಕು. ಚಾರಣದ ವೇಳೆಯಲ್ಲಿ ಚಾರಣಿಗರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಮತ್ತು ನೀರನ್ನು ತಮ್ಮ ಜೊತೆ ಕೊಂಡೊಯ್ಯಬೇಕು ಮತ್ತು ಮಲಗಲು ಬೇಕಾದ ಸರಂಜಾಮುಗಳನ್ನು ಕೂಡ ಕೊಂಡೊಯ್ಯಬೇಕು. ಚಾರಣದ ದಿನಗಳ ಸಂಖ್ಯೆ ಹೆಚ್ಚಾದಂತೆ ಹೊರಬೇಕಾದ ಸಾಮಾಗ್ರಿಗಳ ಸಂಖ್ಯೆಯೂ ಏರುತ್ತಾ ಹೋಗುತ್ತದೆ. ಆದ್ದರಿಂದ ಚಾರಣಿಗರು ಮೊದಲೆ ಹೇಳಿದ ಹಾಗೆ ಚಾರಣಕ್ಕೆ ಯೋಜನೆಗಳನ್ನು ಹಾಕಬೇಕು.

ಚಾರಣದ ಕೆಲವು ಸ್ಥಳಗಳಿಗೆ ದಾರಿ ಇರುತ್ತದೆ, ಹಾಗು ಕೆಲವು ಕಡೆ ಚಾರಣಿಗರು ಆ ಪ್ರದೇಶದ ನಕ್ಷೆ ಮತ್ತು ದಿಕ್ಸೂಚಿಗಳ ಸಹಾಯದಿಂದ ಗಮ್ಯವನ್ನು ತಲುಪಬೇಕಾಗುತ್ತದೆ. ಕೆಲವು ಚಾರಣಗಳಿಗೆ ಮಾರ್ಗದರ್ಶಿಗಳ ಸಹಾಯವೂ ಕೂಡ ಬೇಕಾಗುತ್ತದೆ.

ಹಮ್ಮಿಕೊಂಡ ಚಾರಣವು ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ ಅಥವಾ ರಕ್ಷಿತ ಅರಣ್ಯಗಳ ಮೂಲಕ ಹಾದು ಹೋಗುವಂತಿದ್ದರೆ ಮೊದಲೆ ಅರಣ್ಯ ಇಲಾಖೆಯಿಂದ ಸೂಕ್ತ ವಿಧಿ ವಿಧಾನಗಳನ್ನು ಅನುಸರಿಸಿ ಅನುಮತಿ ಪಡೆಯುವುದು ಅನಿವಾರ್ಯ ಮತ್ತು ಚಾರಣದ ಮಾರ್ಗ ಎದುರಾಗಬಹುದಾದ ಅಪಾಯಗಳ ಕುರಿತು ಮೊದಲೆ ಮಾಹಿತಿ ಪಡೆಯುವುದು ಸೂಕ್ತ. ಹಾಗೆಯೆ ಕೆಲವು ಸ್ಥಳಗಳಿಗೆ ಚಾರಣ ಮಾಡುವಾಗ ಯಾವುದೇ ಅನುಮತಿ ಪಡೆಯುವುದು ಬೇಡವಾಗಿದ್ದರೆ, ಅಲ್ಲಿರುವ ಸ್ಥಳೀಯರ ಮಾರ್ಗದರ್ಶನ ಅಥವಾ ಮಾಹಿತಿ ಪಡೆದರೆ ಉತ್ತಮ.

ಚಾರಣದಿಂದ ಆರೋಗ್ಯ

[ಬದಲಾಯಿಸಿ]

ನಿಯಮಿತವಾಗಿ ಚಾರಣ ಮಾಡುವುದರಿಂದ, ಚಾರಣಿಗನ ಆರೋಗ್ಯಕ್ಕೆ ಉತ್ತಮ ಕೊಡುಗೆ ದೊರೆಯುತ್ತದೆ. ದೀರ್ಘಕಾಲದ ನಡುಗೆ, ಬೆಟ್ಟ ಏರುವಿಕೆ, ಶುದ್ದಗಾಳಿಯ ಸೇವನೆ ಇವೆಲ್ಲವೂ ದೇಹಾರೋಗ್ಯದ ಮೇಲೆ ಸತ್ಪರಿಣಾಮ ಮಾಡುತ್ತವೆ.

ಚಾರಣದಿಂದ ಲೋಕ ಜ್ಞಾನ

[ಬದಲಾಯಿಸಿ]

ವಿವಿಧ ಹಳ್ಳಿ ಮತ್ತು ಪಟ್ಟಣಗಳ ಮೂಲಕ ಸಾಗಿ, ಚಾರಣ ಮಾಡುವುದರಿಂದಾಗಿ, ಚಾರಣಿಗರಲ್ಲಿ ಸುತ್ತಲಿನ ಜಗತ್ತಿನ ಬಗ್ಗೆ ತಿಳಿವಳಿಕೆಹೆಚ್ಚುತ್ತದೆ. ಹೊಸ ಹೊಸ ಸ್ಥಳಗಳಲ್ಲಿ ನಡೆಯುವಾಗ, ತಕ್ಷಣದ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಉಂಟಾಗುವುದರಿಂದ, ಅವು ಮುಂದಿನ ದಿನಚಿರಿಯಲ್ಲಿ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು, ತಮ್ಮ ಜೀವನವನ್ನು ರೂಪಿಸಲು ಚಾರಣಿಗರಿಗೆ ಸಹಾಯಮಾಡುತ್ತವೆ.

ಕರ್ನಾಟಕದಲ್ಲಿ ಚಾರಣ ಮಾಡಲು ಸ್ಥಳಗಳು

[ಬದಲಾಯಿಸಿ]

ಒಂದು ರೀತಿಯಲ್ಲಿ ನೋಡಿದರೆ, ಕರ್ನಾಟಕವು ಚಾರಣಿಗನ ಸ್ವರ್ಗ ಎನ್ನಬಹುದು. ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ , ಚಾರಣ ನಡೆಸಲು ಯೋಗ್ಯವಾದ ಸುಂದರ ತಾಣಗಳಿವೆ. ಪಶ್ಚಿಮ ಘಟ್ಟಗಳಿಗೆ ಲಗ್ಗೆ ಹಾಕುವುದಾದರೆ, ಕುದುರೆಮುಖ, ಕೊಡಚಾದ್ರಿ, ಕುಮಾರಪರ್ವತ ಮೊದಲಾದವುಗಳು ಚಾರಣಿಗರನ್ನು ಕೈಬೀಸಿ ಕರೆಯುವ ಸ್ಥಳಗಳು ಮತ್ತು ಹಲವಾರು ವರ್ಷಗಳಿಂದ ಇಲ್ಲಿಗೆ ಸಾವಿರಾರು ಚಾರಣಿಗರು ಬಂದು, ಚಾರಣ ನಡೆಸಿದ್ದಾರೆ. ಇದಲ್ಲದೆ, ಪಶ್ಚಿಮ ಘಟ್ಟಗಳಲ್ಲಿ ಅಕ್ಷರಶ: ನೂರಾರು ಚಾರಣ ಮಾಡುವ ತಾಣಗಳಿವೆ. ಅನುಭವಿ ಚಾರಣಿಗರು ಇಲ್ಲಿನ ಎಲ್ಲಾ ಪರ್ವತ ಮತ್ತು ಬೆಟ್ಟಗಳನ್ನು ಏರಬಹುದು. ಜಲಪಾತಗಳತ್ತ ಚಾರಣ ಮಾಡಬಹುದು, ಬಲ್ಲಾಳರಾಯನ ದುರ್ಗ, ಅರಶಿನ ಗುಂಡಿ ಜಲಪಾತ, ಮುಳ್ಳಯ್ಯನಗಿರಿ, ಕಲ್ಹತ್ತಗಿರಿ, ಗಾಳಿಕೆರೆ (ಬಾಬಾ ಬುಡನ್ ಗಿರಿ ಹತ್ತಿರ), ಬ್ರಹ್ಮಗಿರಿ, ಅಬ್ಬೆ ಜಲಪಾತ, ಗೋವರ್ಧನಗಿರಿ (ಕಾನೂರು ಕೋಟೆ), ಕಾರವಾರದ ಹತ್ತಿರದ ಬೆಟ್ಟಗಳು - ಈ ಪಟ್ಟಿ ದೊಡ್ಡದಾಗಿದೆ, ಬಯಲುಸೀಮೆಯಲ್ಲಿ ಚಿತ್ರದುರ್ಗದ ಸುತ್ತಲಿನ ಬೆಟ್ಟಗಳು, ಇತ್ತ ಬಿಳಿಗಿರಿ ರಂಗನ ಬೆಟ್ಟಗಳ ಸಾಲು, ಉತ್ತರದಲ್ಲಿ ಬೆಳಗಾವಿ ಹತ್ತಿರದ ಮಲೆನಾಡು - ಈ ರೀತಿ ಕರ್ನಾಟಕದುದ್ದಕ್ಕೂ ನೂರಾರು ಚಾರಣಿಗರ ಸ್ವರ್ಗಗಳಿವೆ.