ಚೀನೀ ಮಣ್ಣು
ಚೀನೀ ಮಣ್ಣು ಪಿಂಗಾಣಿ ಪಾತ್ರೆಗಳನ್ನು ರಚಿಸಲು ಉಪಯೋಗಿಸುವ ಬಿಳಿಮಣ್ಣು. ಕೆಯೊಲಿನ್ ಪರ್ಯಾಯನಾಮ. ಬಿಳುಪಾದ ಬಣ್ಣ, ಸ್ವಚ್ಛತೆ, ನೀರಿನಲ್ಲಿ ಸುಲಭವಾಗಿ ಕದಡಿಹೋಗುವ ಗುಣ, ಕಬ್ಬಿಣ ಸಂಬಂಧವಾದ ಯಾವ ಕಲ್ಮಷವೂ ಇಲ್ಲದಿರುವಿಕೆ-ಈ ಲಕ್ಷಣಗಳಿಂದ ಕೆಯೊಲಿನ್ ದರ್ಜೆಯ ಮಣ್ಣುಗಳನ್ನು ಗುರುತಿಸಬಹುದು. ರಾಸಾಯನಿಕವಾಗಿ ಇದು ನೀರಿನ ಅಂಶವನ್ನು ಒಳಗೊಂಡಿರುವ ಅಲುಮಿನಿಯಮ್ ಸಿಲಿಕೇಟ್ Al2O3 SiO2 2H2O. ಶುದ್ಧರೂಪದ ಕೆಯೊಲಿನಿನಲ್ಲಿ 46% ಸಿಲಿಕಾನ್ 40% ಅಲುಮಿನ ಮತ್ತು 14% ನೀರಿನ ಅಂಶ ಇರುತ್ತವೆ. ಇದರ ಸಾಪೇಕ್ಷ ಸಾಂದ್ರತೆ 2.6 ಉಷ್ಣತೆ 17500 ಅ. ಮೀರಿದ ಮೇಲೆ ಇದು ಕರಗುವ ಲಕ್ಷಣ ತೋರಿಸುತ್ತದೆ.
ಸಾಮಾನ್ಯವಾಗಿ ಗ್ರಾನೈಟ್ ಸಂಬಂಧದ ಕಲ್ಲುಗಳು ಕ್ಷಯಿಸುವುದರಿಂದ ಕೆಯೊಲಿನ್ ಉತ್ಪತ್ತಿಯಾಗುತ್ತದೆ. ಪ್ರಪಂಚದ ನಾನಾ ದೇಶಗಳಲ್ಲಿ ಕೆಯೊಲಿನ್ ದೊರೆತರೂ ಉತ್ತಮ ದರ್ಜೆಯದು ಹೇರಳವಾಗಿ ದೊರೆಯುವುದು ಬ್ರಿಟನಿನ ಕಾರನ್‍ವಾಲ್ ಮತ್ತು ದವನ್ ಜಿಲ್ಲೆಗಳಲ್ಲಿ ಹಾಗೂ ಚೆಕೋಸ್ಲೊವಾಕಿಯ, ಜರ್ಮನಿ, ಫ್ರಾನ್ಸ್, ದೇಶಗಳಲ್ಲಿ. ಬ್ರಿಟನಿನಲ್ಲಿ ಉತ್ಪತ್ತಿಯಾಗುವ ಕೆಯೊಲಿನ್ ಪ್ರಪಂಚದ ನಾನಾ ಭಾಗಗಳಿಗೆ ರಫ್ತಾಗುತ್ತದೆ. ಪಿಂಗಾಣಿ ಸಾಮಾನುಗಳ ತಯಾರಿಕೆ, ಕಾಗದ ತಯಾರಿಕೆ, ಉತ್ತಮ ದರ್ಜೆಯ ಮಲ್ಲು ಬಟ್ಟೆಗಳ ತಯಾರಿಕೆ, ಬಿಳುಪು ಬಣ್ಣಗಳನ್ನು ಕೊಡುವಿಕೆ, ಬಟ್ಟೆ ಮತ್ತು ಕಾಗದವನ್ನು ನುಣುಪು ಮಾಡುವಿಕೆ, ಒಳ್ಳೆಯ ಹೊಳಪು ಕೊಡುವಿಕೆ ಮುಂತಾದ ಕಾರ್ಯಗಳಲ್ಲಿ ಚೀನೀ ಮಣ್ಣಿನ ಉಪಯೊಗ ಉಂಟು. ಬಣ್ಣಗಳ ತಯಾರಿಕೆಯಲ್ಲಿ ಹಾಗೂ ರಬ್ಬರ್ ಮತ್ತು ಪ್ಲಾಸ್ಟಿಕುಗಳ ತಯಾರಿಕೆಯಲ್ಲಿ ಕೂಡ ಚೀನೀ ಮಣ್ಣು ಅತಿಶಯವಾಗಿ ಉಪಯೋಗವಾಗುತ್ತದೆ.
ಭಾರತದಲ್ಲಿ
[ಬದಲಾಯಿಸಿ]ಭಾರತದಲ್ಲಿ ಚೀನೀ ಮಣ್ಣು ಪ್ರಾಯಶಃ ಎಲ್ಲ ರಾಜ್ಯಗಳಲ್ಲೂ ದೊರೆಯುತ್ತದೆ. ಕಾಗದ, ಬಟ್ಟೆ, ಪಿಂಗಾಣಿ, ಕಾವಿಟ್ಟಿಗೆ, ರಬ್ಬರ್ ಮೊದಲಾದ ಕೈಗಾರಿಕೆಗಳು ದೇಶದಲ್ಲಿ ಬೆಳೆದಂತೆಲ್ಲ ಚೀನೀ ಮಣ್ಣಿನ ಕೈಗಾರಿಕೆ ಅಭಿವೃದ್ಧಿಗೊಳ್ಳುತ್ತ ಬಂದಿದೆ. ಉತ್ಪತ್ತಿಯಾದ ಚೀನೀ ಮಣ್ಣಿನ ಕೈಗಾರಿಕೆಗಳಲ್ಲಿ ಉಪಯೋಗವಾಗುತ್ತದೆ. ಎಲ್ಲೊ ಸ್ವಲ್ಪ ಮಟ್ಟಿಗೆ ಅತಿ ಉತ್ತಮ ದರ್ಜೆಯ ಚೀನೀ ಮಣ್ಣು ಮಾತ್ರ ವಿದೇಶದಿಂದ ಆಮದಾಗುತ್ತದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ 1972 ರಲ್ಲಿ ಉತ್ಪತ್ತಿಯಾದ ಚೀನೀ ಮಣ್ಣಿನ ಪರಿಮಾಣ ಮತ್ತು ಅದರ ಮೌಲ್ಯವನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣಿಸಿದೆ.
ರಾಜ್ಯ | ಪರಿಮಾಣ (ಮೆಟ್ರಿಕ್ ಟನ್ನುಗಳಲ್ಲಿ) |
ಮೌಲ್ಯ (ರೂಪಾಯಿಗಳಲ್ಲಿ) |
---|---|---|
ಆಂಧ್ರಪ್ರದೇಶ | 13.278 | 1,43,000 |
ಬಿಹಾರ | 18,240 | 2,46,000 |
ದೆಹಲಿ | 87,236 | 5,59,000 |
ಗುಜರಾತ್ | 2,320 | 42,000 |
ಹರಿಯಾಣ | 10,640 | 1,10,000 |
ಕೇರಳ | 620 | 9,000 |
ಮಧ್ಯಪ್ರದೇಶ | 11,994 | 63,000 |
ಮಹಾರಾಷ್ಟ್ರ | 2,009 | 17,000 |
ಕರ್ನಾಟಕ | 7,853 | 1,34,000 |
ಒರಿಸ್ಸಾ | 1,469 | 29,000 |
ರಾಜಸ್ಥಾನ | 68,179 | 10,81,000 |
ತಮಿಳುನಾಡು | 5,963 | 76,000 |
ಪಶ್ಚಿಮ ಬಂಗಾಳ | 15,045 | 4,40,000 |
ಗಣಿಯಿಂದ ತೋಡಿದ ಚೀನೀ ಮಣ್ಣನ್ನು ತೊಳೆದು ಶುದ್ಧೀಕರಿಸಬೇಕಾಗುತ್ತದೆ. ಮಣ್ಣನ್ನು ನೀರಿನಲ್ಲಿ ಮಿಶ್ರಮಾಡಿ ಬೇರೆ ಬೇರೆ ಹಂತಗಳಲ್ಲಿ ತೊಳೆಯುವುದರಿಂದ ಅದರಲ್ಲಿ ಬೆರೆತಿರುವ ಬೆಣಚು, ಮರಳು, ಕಲ್ಮಷಗಳೆಲ್ಲವೂ ಕಳೆದು ಶುದ್ಧ ಬಿಳಿಯ ಮಣ್ಣು ಹಾಲಿನ ಕೆನೆಯಂತೆ ಕೊನೆಗೆ ಉಳಿಯುತ್ತದೆ. ಇದನ್ನು ಬಟ್ಟೆಯ ಮಧ್ಯೆ ಒತ್ತಿ ನೀರೆಲ್ಲವನ್ನೂ ತೆಗೆದು ಒಣಗಿಸಿ ಮಾರಾಟಕ್ಕಾಗಿ ಸಿದ್ಧಪಡಿಸುತ್ತಾರೆ. ಕರ್ನಾಟಕದಲ್ಲಿ ಈ ರೀತಿ ಮಣ್ಣನ್ನು ಶುದ್ಧೀಕರಿಸುವ ಕಾರ್ಖಾನೆಗಳು ಹಾಸನ ಜಿಲ್ಲೆಯ ಬಾಗೇಶಪುರದ ಬಳಿಯ ತೀರ್ಥಹಳ್ಳಿಯ ದೇವಂಗಿ ಬಳಿಯೂ ಇವೆ. ಶುದ್ಧೀಕರಿಸಿದ ಚೀನೀ ಮಣ್ಣಿನ ರಾಸಾಯನಿಕ ಲಕ್ಷಣಗಳು ಈ ಕೆಳಗಿನಂತಿವೆ.
ಪದಾರ್ಥ | ಶೇಕಡಾವಾರು |
---|---|
ಸಿಲಿಕ | 46-48 |
ಅಲುಮಿನ | 38-39 |
ಕಬ್ಬಿಣ ಆಮ್ಲ | 0.4-0.6 |
ಟೈಟೇನಿಯಮ್ ಆಮ್ಲ | 0.2-0.4 |
ಇತರ | 0.2-0.4 |
ನೀರಿನ ಅಂಶ | 12-14 |
ಕರ್ನಾಟಕದಲ್ಲಿ ಚೀನೀ ಮಣ್ಣಿನ ನಿಕ್ಷೇಪಗಳ ಕೆಲಸ ಮುಖ್ಯವಾಗಿ ನಡೆಯುತ್ತಿರುವುದು ಹಾಸನ ಜಿಲ್ಲೆಯ ಬಾಗೇಶಪುರ ಮತ್ತು ಶಿವಮೊಗ್ಗ ಜಿಲ್ಲೆಯ ದೇವಲಗಿ ಬಳಿ, ಇಲ್ಲಿನ ಗಣಿಗಳನ್ನು ಮೈಸೂರು ಮಿನರಲ್ಸ್ ಸಂಸ್ಥೆ ನಡೆಸುತ್ತಿದೆ. ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಚೀನಿ ಮಣ್ಣು ದೊರೆಯುವ ಮುಖ್ಯ ಸ್ಥಳಗಳನ್ನು ಮುಂದೆ ಹೆಸರಿಸಲಾಗಿದೆ: ಬೆಂಗಳೂರು (ಗೊಲ್ಲರಹಳ್ಳಿ), ಬೆಳಗಾಂವಿ (ಕಾರಲಗಿ, ಖಾನಾಪುರ), ಚಿತ್ರದುರ್ಗ (ಭೀಮಸಮುದ್ರ), ಧಾರವಾಡ (ಮಾಸೂರು, ಶೇಷಗಿರಿ, ಅಡೂರು), ಹಾಸನ (ಬಾಗೇಶಪುರ, ನಂದೀಹಳ್ಳಿ), ಕೋಲಾರ (ಗೊಕುಂಟ, ಕರಡಿಬಂಡೆ), ಶಿವಮೊಗ್ಗ (ದೇವಂಗಿ, ಹೊಸನಗರ, ಆನಂದಪುರ), ದಕ್ಷಿಣ ಕನ್ನಡ (ಗುರುವಾಯನ ಕೆರೆ, ಉಳ್ಳಾಲ), ಬೀದರ್ (ಕಮಧಾನ).