ದುರ್ಗುಣ
ದುರ್ಗುಣ ಸಂಬಂಧಿಸಿದ ಸಮಾಜದಲ್ಲಿ ಸಾಮಾನ್ಯವಾಗಿ ಅನೈತಿಕ, ಪಾಪದ್ದು, ಆಪರಾಧಿಕ, ಒರಟು, ನಿಷೇಧಿತ, ನೀತಿಗೆಟ್ಟದ್ದು ಅಥವಾ ಅವಮಾನಕರ ಎಂದು ಪರಿಗಣಿಸಲಾದ ಒಂದು ಅಭ್ಯಾಸ, ವರ್ತನೆ, ಅಥವಾ ರೂಢಿ. ಹೆಚ್ಚು ಸಣ್ಣ ಬಳಕೆಯಲ್ಲಿ, ದುರ್ಗುಣವು ದೋಷ, ನಕಾರಾತ್ಮಕ ನಡತೆ ಲಕ್ಷಣ, ನ್ಯೂನತೆ, ದುರ್ಬಲತೆ, ಕೆಟ್ಟ ಅಥವಾ (ಧೂಮಪಾನದ ಚಟದಂತಹ) ಅನಾರೋಗ್ಯಕರ ಚಾಳಿಯನ್ನು ಸೂಚಿಸಬಹುದು. ದುರ್ಗುಣಗಳು ಸಾಮಾನ್ಯವಾಗಿ ನೈತಿಕತೆಯ ಬದಲಾಗಿ ಒಬ್ಬ ವ್ಯಕ್ತಿಯ ನಡತೆ ಅಥವಾ ಮನೋಧರ್ಮದಲ್ಲಿನ ಉಲ್ಲಂಘನೆಗೆ ಸಂಬಂಧಿಸಿರುತ್ತವೆ.[೧] ದುರ್ಗುಣಕ್ಕೆ ಕೆಲವು ಸಮಾನಾರ್ಥಕ ಪದಗಳೆಂದರೆ ದೋಷ, ಪಾಪ, ನೀತಿಭ್ರಷ್ಟತೆ, ಅಕ್ರಮ, ದುಷ್ಟತನ, ಮತ್ತು ನಡೆಗೇಡಿತನ. ಸದ್ಗುಣ ದುರ್ಗುಣದ ವಿರುದ್ಧ ಪದವಾಗಿದೆ.
ದೇಶ ಅಥವಾ ನ್ಯಾಯವ್ಯಾಪ್ತಿಯನ್ನು ಅವಲಂಬಿಸಿ, ದುರ್ಗುಣ ಅಪರಾಧಗಳನ್ನು ಆಪರಾಧಿಕ ಸಂಹಿತೆಗಳಲ್ಲಿ ಒಂದು ಪ್ರತ್ಯೇಕ ವರ್ಗವಾಗಿ ಪರಿಗಣಿಸಬಹುದು ಅಥವಾ ಪರಿಗಣಿಸದಿರಬಹುದು. ದುರ್ಗುಣವನ್ನು ನ್ಯಾಯಸಂಹಿತೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗದ ನ್ಯಾಯವ್ಯಾಪ್ತಿಗಳಲ್ಲೂ, ದುರ್ಗುಣ ಪದವನ್ನು ಹಲವುವೇಳೆ ಕಾನೂನು ಜಾರಿ ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಅಂತರ್ಗತವಾಗಿ ಅನಿತಿಕ ಎಂದು ಪರಿಗಣಿಸಲಾದ ಚಟುವಟಿಕೆಗಳು ಸೇರಿದ ಅಪರಾಧಗಳಿಗೆ ಸರ್ವಾನ್ವಯ ಪದವಾಗಿ ಬಳಸಲಾಗುತ್ತದೆ. ಯುನೈಟಡ್ ಕಿಂಗ್ಡಮ್‍ನಲ್ಲಿ, ದುರ್ಗುಣ ಪದವನ್ನು ಸಾಮಾನ್ಯವಾಗಿ ಕಾನೂನು ಮತ್ತು ಕಾನೂನು ಜಾರಿಯಲ್ಲಿ ವೇಶ್ಯಾವಾಟಿಕೆ ಹಾಗೂ ಅಶ್ಲೀಲರಚನೆಗೆ ಸಂಬಂಧಿಸಿದ ಅಪರಾಧಗಳನ್ನು ಸೂಚಿಸಲು ಬಳಸಲಾಗುತ್ತದೆ. ಅಮೇರಿಕದಲ್ಲಿ, ಈ ಪದವನ್ನು ಮಾದಕ ವಸ್ತುಗಳು, ಮದ್ಯ, ಮತ್ತು ಜೂಜಾಟಕ್ಕೆ ಸಂಬಂಧಿಸಿದ ಅಪರಾಧಗಳನ್ನು ಸೂಚಿಸಲೂ ಬಳಸಲಾಗುತ್ತದೆ.
ಬೌದ್ಧ ಧರ್ಮದಲ್ಲಿ ನಿರ್ಬಂಧಿತವಾದ ೧೦೮ ದುರ್ಗುಣಗಳಿವೆ, ಇವುಗಳಲ್ಲಿ ೧೦ ಬಂಧಗಳಿವೆ. ಈ ಬಂಧಗಳು ಯಾವುವೆಂದರೆ, ಅವಮಾನದ ಅನುಪಸ್ಥಿತಿ, ಮುಜುಗರದ ಅನುಪಸ್ಥಿತಿ, ಅಸೂಯೆ, ಕೃಪಣತನ, ಪರಿತಾಪ, ಅರೆನಿದ್ರಾವಸ್ಥೆ, ಗಮನಭಂಗ, ಜಡತ್ವ, ಕೋಪ, ತಪ್ಪನ್ನು ಮರೆಮಾಚುವುದು. ಎರಡು ಬಗೆಯ ದುರ್ಗುಣಗಳಿವೆ ಎಂದು ಕ್ರಿಶ್ಚಿಯನ್ನರು ನಂಬುತ್ತಾರೆ: ಭೌತಿಕ ಜೀವಿಯಿಂದ ಹುಟ್ಟುಗುಣಗಳಾಗಿ ಬರುವ ದುರ್ಗುಣಗಳು. ಇವು ವ್ಯತಿರಿಕ್ತವಾಗಬಹುದು (ಉದಾ. ಕಾಮ); ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿ ಹುಸಿ ವಿಗ್ರಹಾರಾಧನೆಯಿಂದ ಬರುವ ದುರ್ಗುಣಗಳು. ಮೊದಲ ಬಗೆಯ ದುರ್ಗುಣ ಪಾಪದ್ದಾದರೂ, ಎರಡನೆಯದಕ್ಕಿಂತ ಕಡಿಮೆ ಗಂಭೀರವಾದದ್ದು ಎಂದು ನಂಬಲಾಗಿದೆ. ಕ್ರಿಶ್ಚಿಯನ್ನರು ಆಧ್ಯಾತ್ಮಿಕ ಎಂದು ಗುರುತಿಸುವ ದುರ್ಗುಣಗಳಲ್ಲಿ ಧರ್ಮನಿಂದೆ, ಧರ್ಮಭ್ರಷ್ಟತೆ, ಹತಾಶೆ, ದ್ವೇಷ ಮತ್ತು ಉದಾಸೀನತೆ ಸೇರಿವೆ. ಇಟಲಿಯ ಕವಿ ಡಾಂಟೆ ಏಳು ಮಾರಣಾಂತಿಕ ದುರ್ಗುಣಗಳನ್ನು ಪಟ್ಟಿಮಾಡಿದನು. ಅವೆಂದರೆ: ಗರ್ವ ಅಥವಾ ಅಹಂಕಾರ, ಅಸೂಯೆ, ಕೋಪ, ಸೋಮಾರಿತನ, ಹಣದಾಹ, ಹೊಟ್ಟೆಬಾಕತನ ಮತ್ತು ಕಾಮ.
ಉಲ್ಲೇಖಗಳು
[ಬದಲಾಯಿಸಿ]- ↑ 'Jaucourt, Louis, chevalier de. "Vice." The Encyclopedia of Diderot & d'Alembert Collaborative Translation Project. Translated by Mary McAlpin. Ann Arbor: Michigan Publishing, University of Michigan Library, 2002. Web. 1 April 2015. <http://hdl.handle.net/2027/spo.did2222.0000.010>. Trans. of "Vice," Encyclopédie ou Dictionnaire raisonné des sciences, des arts et des métiers, vol. 17. Paris, 1765.'[ಶಾಶ್ವತವಾಗಿ ಮಡಿದ ಕೊಂಡಿ]