ಸ್ಯಾಮ್ ಮಾಣಿಕ್ ಶಾ
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ | |
---|---|
ಜನನ | ಎಪ್ರಿಲ್ ೩, ೧೯೧೪ ಪಂಜಾಬಿನ ಅಮೃತಸರ |
ಮರಣ | ಜೂನ್ ೨೭, ೨೦೦೮ ತಮಿಳುನಾಡಿನ ವೆಲ್ಲಿಂಗ್ಟನ್ |
ಇತರೆ ಹೆಸರು | ಸ್ಯಾಮ್ ಬಹದ್ದೂರ್ |
ವೃತ್ತಿ | ಭಾರತ ಸೇನೆಯ ಮಹಾದಂಡನಾಯಕ |
ಪ್ರಶಸ್ತಿಗಳು | ಫೀಲ್ಡ್ ಮಾರ್ಷಲ್ ಪದ್ಮವಿಭೂಷಣ ಪದ್ಮಭೂಷಣ ಸೇನಾ ಪದಕ |
Signature | |
ಭಾರತ ಸೇನೆಯ ಮಹಾನ್ ದಂಡನಾಯಕರಾಗಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ (ಎಪ್ರಿಲ್ ೩, ೧೯೪೮-ಜೂನ್ ೨೭,೨೦೦೮) ಅನುಪಮ ಸೇವೆ ಸಲ್ಲಿಸಿದವರಾಗಿದ್ದಾರೆ. ಗುಜರಾತಿನ ವೆಲ್ಸಾಡಿನಿಂದ ಪಂಜಾಬಿಗೆ ವಲಸೆ ಹೋಗಿದ್ದ ಪಾರ್ಸಿ ಕುಟುಂಬವೊಂದದಲ್ಲಿ ಮಾಣಿಕ್ ಶಾ, 1914ರ ಏಪ್ರಿಲ್ 3ರಂದು ಅಮೃತಸರದಲ್ಲಿ ಜನಿಸಿದರು.
ಭಾರತದ ಪ್ರಥಮ ಫೀಲ್ಡ್ ಮಾರ್ಷಲ್
[ಬದಲಾಯಿಸಿ]೧೯೭೧ರಲ್ಲಿ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಭಾರತ – ಪಾಕ್ ನಡುವಿನ ಯುದ್ಧದಲ್ಲಿ ಭಾರತದ ವಿಜಯದ ರೂವಾರಿಯಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ, ಎರಡನೇ ವಿಶ್ವಮಹಾಯುದ್ಧದಲ್ಲಿ ಹೋರಾಡಿ ಶೌರ್ಯ ಪಶಸ್ತಿಗೆ ಭಾಜನರಾಗಿದ್ದವರು. ಸ್ಯಾಮ್ ಬಹಾದೂರ್ ಎಂದೇ ಆದರಪೂರ್ವಕವಾಗಿ ಕರೆಸಿಕೊಂಡ ಮಾಣಿಕ್ ಶಾ ಎರಡನೇ ವಿಶ್ವ ಮಹಾಯುದ್ಧದಲ್ಲಿ ಬರ್ಮಾದಲ್ಲಿ ಹೋರಾಟ ನಡೆಸಿದ ವೇಳೆ ತೀವ್ರವಾಗಿ ಗಾಯಗೊಂಡು ಬದುಕುಳಿದ ಅದೃಷ್ಟಶಾಲಿ. ಭಾರತ ಸೇನೆಯ ಅತ್ಯುನ್ನತ ಹುದ್ದೆ ಫೀಲ್ಡ್ ಮಾರ್ಷಲ್ ಗೌರವ ಪಡೆದ ಪ್ರಥಮರಿವರು
ಐದು ಯುದ್ಧಗಳಲ್ಲಿ ಹೋರಾಡಿದ ಸೇನಾನಿ
[ಬದಲಾಯಿಸಿ]ರಾಷ್ಟ್ರೀಯ ಹೀರೋ ಹಾಗೂ ದಂತಕತೆಯಾದ ಮೇರುಯೋಧ ಮಾಣಿಕ್ ಶಾ ಸಹೋದ್ಯೋಗಿಗಳಿಗೆ ಮಾದರಿಯಾಗಿದ್ದರು. ಬ್ರಿಟಿಷರ ಕಾಲದಲ್ಲಿ ಆರಂಭವಾದ ಅವರ ಮಿಲಿಟರಿ ವೃತ್ತಿ ನಾಲ್ಕು ದಶಕಗಳ ಕಾಲ ಸಾಗಿದ್ದು ಈ ಅವಧಿಯಲ್ಲಿ ಎರಡನೇ ವಿಶ್ವ ಸಮರವನ್ನೂ ಒಳಗೊಂಡಂತೆ ಒಟ್ಟು ೫ ಯುದ್ಧಗಳಲ್ಲಿ ಅವರು ಹೋರಾಡಿದ್ದರು. ಸುಂದರ ವ್ಯಕ್ತಿತ್ವದ ‘ಹ್ಯಾಂಡಲ್ ಬಾರ್’ ಮೀಸೆಯ ಮಾಣಿಕ್ ಶಾ ವಿನೋದಪೂರ್ಣ ಮಾತುಕತೆಗಳಿಗೆ ಕೂಡಾ ಪ್ರಸಿದ್ಧಿ. ಚತುರ ಯುದ್ಧಕಲಾ ತಂತ್ರಗಾರರಾಗಿದ್ದ ಅವರು 1971ರಲ್ಲಿ ಪೂರ್ವ ಪಶ್ಚಿಮದ ಗಡಿಗಳಲ್ಲಿ ಭಾರತೀಯ ಸೇನೆಯು ಪಾಕಿಸ್ಥಾನದ ಮೇಲೆ ನಡೆಸಿದ ದಾಳಿಯನ್ನು ಅತ್ಯಂತ ಚಾಣಾಕ್ಷತನದಿಂದ ಯೋಜಿಸಿದ್ದರು.
ಯಶೋಗಾಥೆ
[ಬದಲಾಯಿಸಿ]ಭಾರತೀಯ ಜನಪ್ರಿಯ ಯೋಧ ಸ್ಯಾಮ್ ಕುರಿತು ಹೇರಳ ದಂತಕಥೆಗಳಿವೆ. ೧೯೭೧ರಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಸ್ಯಾಮ್ ಮಾಣಿಕ್ ಶಾ ಬಾಂಗ್ಲಾ ದೇಶದ ವಿಷಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಎದುರು ಹಾಕಿಕೊಂಡಿದ್ದು ಇಂತಹ ಒಂದು ಘಟನೆ. ೧೯೯೫ರ ಅಕ್ಟೋಬರಿನಲ್ಲಿ ದಿಲ್ಲಿಯಲ್ಲಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಸ್ಮಾರಕ ಉಪನ್ಯಾಸದಲ್ಲಿ ಸ್ಯಾಮ್ ಈ ಘಟನೆಯನ್ನು ವಿವರಿಸಿದ್ದು ಹೀಗೆ:
“ನಾನು ಫೀಲ್ಡ್ ಮಾರ್ಷಲ್ ಆದದ್ದಕ್ಕೂ, ಸೇವೆಯಿಂದ ವಜಾಗೊಳ್ಳಬಹುದಾಗಿದ್ದಕ್ಕೂ ಇದ್ದ ಅಂತರ ಅತ್ಯಲ್ಪದ್ದು. ೧೯೭೧ರಲ್ಲಿ ಪಾಕಿಸ್ಥಾನವು ಪೂರ್ವ ಪಾಕಿಸ್ಥಾನದಲ್ಲಿ ಸೇನೆಯನ್ನು ನುಗ್ಗಿಸಿದಾಗ, ಲಕ್ಷಾಂತರ ನಿರಾಶ್ರಿತರು ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ನುಗ್ಗತೊಡಗಿದ್ದರು. ಪ್ರಧಾನಿ ತನ್ನ ಕಚೇರಿಯಲ್ಲಿ ಸಂಪುಟ ಸಭೆಯೊಂದನ್ನು ಕರೆದಿದ್ದರು. ಅದಕ್ಕೆ ನನ್ನನ್ನೂ ಕರೆಸಲಾಗಿತ್ತು. ಸಿಟ್ಟಿನಿಂದ ಕುದಿಯುತ್ತಿದ್ದ ಕಠೋರ ಮುಖಭಾವದ ಪ್ರಧಾನಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾ ಮುಖ್ಯಮಂತ್ರಿಗಳಿಂದ ಬಂದಿದ್ದ ತಂತಿ ಸಂದೇಶಗಳನ್ನು ಓದಿ ಹೇಳಿದರು.
ಅಷ್ಟಾದ ನಂತರ ನನ್ನೆಡೆಗೆ ತಿರುಗಿದ ಅವರು “ಆ ಬಗ್ಗೆ ನೀವೇನು ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ನಾನು ತಣ್ಣಗಿನ ಸ್ವರದಲ್ಲಿ, “ಏನೂ ಇಲ್ಲ. ಅದು ನನಗೆ ಸಂಬಂಧವಿಲ್ಲದ ವಿಷಯ. ಪೂರ್ವ ಪಾಕಿಸ್ಥಾನಿಗಳು ದಂಗೆಯೇಳುವಂತೆ ಪ್ರಚೋದಿಸಲು ಬಿ.ಎಸ್.ಎಫ್ ಮತ್ತು ಸಿ.ಆರ್. ಪಿ. ಎಫ್ ಗೆ ಅವಕಾಶ ನೀಡುವಾಗ ನೀವು ನನ್ನೊಂದಿಗೆ ಸಮಾಲೋಚಿಸಿರಲಿಲ್ಲ. ಈಗ ನೀವು ತೊಂದರೆಯಲ್ಲಿ ಸಿಲುಕಿದ್ದೀರಿ. ನನ್ನ ಬಳಿಗೆ ಬಂದಿದ್ದೀರಿ. ನನ್ನದು ಉದ್ದವಾದ ಮೂಗು, ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತದೆ” ಎಂದು ಉತ್ತರಿಸಿದೆ.
ನೀವು ಪಾಕಿಸ್ಥಾನವನ್ನು ಪ್ರವೇಶಿಸಬೇಕೆಂದು ನಾನು ಬಯಸಿದ್ದೇನೆ ಎಂದು ಇಂದಿರಾ ಹೇಳಿದಾಗ, ಅಂದರೆ ಯುದ್ಧ ಎಂದು ನಾನು ಪ್ರತಿಕ್ರಿಯಿಸಿದೆ. ಅದು ಯುದ್ಧವಾದರೂ ನಾನು ಲೆಕ್ಕಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದಾಗ, “ನೀವು ಸಿದ್ಧರಿದ್ದೀರಾ? ನಾನಂತೂ ಖಂಡಿತವಾಗಿಯೂ ಇಲ್ಲ. ಇದು ಏಪ್ರಿಲ್ ತಿಂಗಳ ಕೊನೆ. ಹಿಮಾಲಯದ ಕಣಿವೆಗಳು ತೆರೆದುಕೊಳ್ಳುತ್ತಿವೆ ಮತ್ತು ಚೀನಾದಿಂದ ದಾಳಿ ನಡೆಯಬಹುದು; ಪೂರ್ವ ಪಾಕಿಸ್ತಾನದಲ್ಲಿ ಮಳೆಗಾಲ ಇನ್ನೇನು ಆರಂಭವಾಗಲಿದೆ ಮತ್ತು ಹಾಗೆ ಬೀಳುವ ಮಳೆ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಸುರಿಯುತ್ತದೆ. ಇಡೀ ದೇಶವೇ ಪ್ರವಾಹದಲ್ಲಿ ಸಿಲುಕುತ್ತದೆ. ಹಿಮ ಕರಗಿದೊಡನೆ ನದಿಗಳು ಸಾಗರದಂತಾಗುತ್ತವೆ. ನನ್ನೆಲ್ಲ ಚಲನವಲನಗಳೂ ರಸ್ತೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಅಲ್ಲದೆ ಪ್ರತಿಕೂಲ ಹವಾಮಾನದಿಂದಾಗಿ ನಮಗೆ ನೆರವು ನೀಡಲು ವಾಯುಪಡೆಗೂ ಸಾಧ್ಯವಾಗುವುದಿಲ್ಲ. ಈಗ ಪ್ರಧಾನಮಂತ್ರಿಗಳೇ, ನನಗೆ ನಿಮ್ಮ ಆದೇಶವೇನೆಂದು ಹೇಳಿ.”
ಹೀಗೆ ನಾನು ಹೇಳಿದಾಗ, ಹಲ್ಲು ಕಚ್ಚಿಕೊಂಡು ಮುಖದಲ್ಲಿ ಕಾಠಿಣ್ಯ ತುಂಬಿಕೊಂದಿದ್ದ ಪ್ರಧಾನಿಯವರು, ಸಂಪುಟವು ಸಂಜೆ ನಾಲ್ಕು ಗಂಟೆಗೆ ಮತ್ತೆ ಸೇರುತ್ತದೆ ಎಂದಷ್ಟೇ ಹೇಳಿದರು. ಸಂಪುಟದ ಸದಸ್ಯರ ಹಿಂದೆ ನಾನು ಹೊರಬೀಳುತ್ತಿದ್ದಾಗ, ಚೀಫ್ ಸ್ವಲ್ಪ ನಿಲ್ಲುತ್ತೀರಾ ಎಂದು ಇಂದಿರಾ ಹೇಳಿದರು. ಅವರೆಡೆಗೆ ತಿರುಗಿದ ನಾನು “ಪ್ರಧಾನಿಗಳೇ ನೀವು ಬಾಯಿ ತೆರೆಯುವ ಮುನ್ನ ಒಂದು ಮಾತು. ಮಾನಸಿಕ ಅಥವಾ ದೈಹಿಕ ಅನಾರೋಗ್ಯದ ನೆಪದಲ್ಲಿ ನನ್ನ ರಾಜೀನಾಮೆಯನ್ನು ಕಳುಹಿಸಬಹುದೇ?” ಎಂದು ಪ್ರಶ್ನಿಸಿದೆ.
“ನೀವು ಹೇಳಿದ ಪ್ರತಿಯೊಂದೂ ನಿಜ” ಎಂದು ಇಂದಿರಾ ಹೇಳಿದಾಗ, “ನಿಮಗೆ ನಿಜ ಹೇಳುವುದು ನನ್ನ ಕರ್ತವ್ಯ. ಹೋರಾಡುವುದು ನನ್ನ ಕೆಲಸ. ಗೆಲುವಿಗಾಗಿ ಹೋರಾಡುವುದು ನನ್ನ ಕೆಲಸ. ನಿಮಗೆ ನಿಜವನ್ನೇ ಹೇಳಬೇಕು” ಎಂದೆ. ನಸುನಕ್ಕ ಇಂದಿರಾ ಸರಿ. “ಸ್ಯಾಮ್. ನನಗೇನು ಬೇಕು ಎಂದು ನಿಮಗೆ ಗೊತ್ತು ತಾನೇ?” ಎಂದು ಪ್ರಶ್ನಿಸಿದರು. “ಹೌದು ಅದು ನನಗೆ ತಿಳಿದಿದೆ” ಎಂದಷ್ಟೇ ನಾನು ಉತ್ತರಿಸಿದೆ.
ಏಳು ತಿಂಗಳ ನಂತರ ಭಾರತ – ಪಾಕ್ ಯುದ್ಧ ನಡೆದಾಗ ಸ್ಯಾಮ್ ವಿಜಯಮಾಲೆ ಧರಿಸಿ ಬಂದಿದ್ದರು!
ಗೌರವಗಳು
[ಬದಲಾಯಿಸಿ]೧೯೬೯ರಲ್ಲಿ ಅವರು ದೇಶದ ಭೂಪಡೆಯ 8ನೇ ಮುಖ್ಯಸ್ಥರಾದರು. ೧೯೭೩ರ ಜನವರಿ ಒಂದರಂದು ಅವರಿಗೆ ರಾಷ್ಟ್ರಪತಿಯವರು ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಗೌರವವನ್ನು ಪ್ರದಾನಿಸಿದರು. ೧೯೬೮ರಲ್ಲಿ ಪದ್ಮಭೂಷಣ ಮತ್ತು ೧೯೭೨ರಲ್ಲಿ ಪದ್ಮವಿಭೂಷಣ ಗೌರವಗಳಿಗೂ ಅವರು ಪಾತ್ರರಾಗಿದ್ದರು.
ವಿದಾಯ
[ಬದಲಾಯಿಸಿ]ಈ ಮಹಾನುಭಾವರು ಜೂನ್ 27, 2008ರಂದು ಈ ಲೋಕವನ್ನಗಲಿದರು. ಈ ಮರೆಯಲಾಗದ ನಮ್ಮ ಬದುಕಿನ ಕಾಲದ ಈ ಮಹಾನ್ ನಾಯಕನಿಗೆ ನಮ್ಮ ಗೌರವಪೂರ್ವಕ ನಮನಗಳು.