ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲಿಕಲ್ಲು
ಆಲಿಕಲ್ಲು
ಪದರುಗಟ್ಟಿದ ಮೋಡಗಳಿಂದ (ಕ್ಯೊಮುಲೋ ನಿಂಬಸ್ ಕ್ಲೌಡ್ಸ್) ಕೆಳಗೆ ಬೀಳುವ ಹಿಮಗಡ್ಡೆಯ ಸಣ್ಣ ಉಂಡೆಗಳು (ಹೇಲ್). ಹವಾಶಾಸ್ತ್ರದ ಪ್ರಕಾರ ಆಲಿಕಲ್ಲು ಉತ್ಪನ್ನವಾಗುವ ಸನ್ನಿವೇಶಗಳು ಮೂರು : 1. ಕೆಳಮಟ್ಟದಲ್ಲಿ ತೇವಪೂರಿತ ಬಿಸಿಗಾಳಿ : 2. ಉನ್ನತ ಎತ್ತರಗಳವರೆಗೆ (50,000' ಗಳನ್ನೂ ಮೀರಿ) ವ್ಯಾಪಿಸಿರುವ ಸಿಡಿಲಿನಿಂದ ಕೂಡಿದ ಬಿರುಗಾಳಿ ; 3. ನೆಲದಿಂದ 10,000' - 12,000' ಎತ್ತರದಲ್ಲಿ ಹಿಮಬಿಂದು (ಫ್ರೀಸಿಂಗ್ ಪಾಯಿಂಟ್). ಹಿಮ ಮತ್ತು ನೀರು ಇವುಗಳ ಪರ್ಯಾಯ ಮಿಶ್ರಣದಿಂದ ಆಲಿಕಲ್ಲು ಬೆಳೆದು ವೃದ್ಧಿಯಾಗಿ ಹರಳುಗಟ್ಟುವುದು. ಗುಡುಗು, ಬಿರುಗಾಳಿಯಿಂದ ಕೂಡಿದ ಮಳೆಯಲ್ಲಿ ಒಮ್ಮೊಮ್ಮೆ ಆಲಿಕಲ್ಲುಗಳು ಬೀಳುತ್ತವೆ. ರೂಢಿಯಲ್ಲಿ ಇಂಥ ಮಳೆಯನ್ನು ಕಲ್ಮಳೆ ಎನ್ನುತ್ತಾರೆ. ಆಲಿಕಲ್ಲಿನ ಆಕಾರ ವಿವಿಧ. ಎರಡು ಪೌಂಡ್ ತೂಕದವನ್ನೂ ಕಂಡವರಿದ್ದಾರೆ. ತೇವಾಂಶವುಳ್ಳ ಗಾಳಿ ಶೀಘ್ರವಾಗಿ ಮೇಲಕ್ಕೇರುವುದರಿಂದ ಆಲಿಕಲ್ಲುಗಳು ಉತ್ಪತ್ತಿಯಾಗುತ್ತವೆ. ನೀರಿನ ಹನಿಗಳು ಹೆಪ್ಪುಗಟ್ಟಿ ನೀರಿನಲ್ಲಿ ತೇವಾಂಶ ಹೆಚ್ಚಿದಂತೆಲ್ಲ ಇವುಗಳ ಗಾತ್ರ ಮತ್ತು ತೂಕ ಹೆಚ್ಚುತ್ತವೆ. ತೂಕ ಹೆಚ್ಚಿದಾಗ ಮೇಲಕ್ಕೆ ಏರಿ ಹೋಗಲು ಸಾಧ್ಯವಿಲ್ಲದೆ ಕೆಳಕ್ಕೆ ಬೀಳುತ್ತವೆ.
ಚಿತ್ರ-1
ಕೆಳಕ್ಕೆ ಬೀಳುವಾಗ ಗಾಳಿಯಲ್ಲಿನ ತೇವಾಂಶವನ್ನು ಹೀರಿ ಇವುಗಳ ಗಾತ್ರ ಇನ್ನೂ ಹೆಚ್ಚಬಹುದು. ಆಲಿಕಲ್ಲಿನಿಂದ ಕೂಡಿದ ಬಿರುಗಾಳಿಯ ಮಳೆ ಬೆಳೆಗಳಿಗೆ ವಿಪರೀತ ನಷ್ಟವನ್ನುಂಟುಮಾಡುತ್ತದೆ: ಮಾವು ಮುಂತಾದ ಹಣ್ಣುಗಳು ಕೊಳೆಯುತ್ತವೆ; ಕಾಯಿಗಳು ಉದುರಿಹೋಗುತ್ತವೆ. ಕುಂಬಳ ಮೊದಲಾದುವು ಕೆಡುತ್ತವೆ. ಕೆಲವು ವೇಳೆ ಈ ಮಳೆಗೆ ಸಿಕ್ಕಿಹಾಕಿಕೊಂಡ ಪ್ರಾಣಿಗಳು ಮತ್ತು ಜನರು ಸಾಯುವುದೂ ಉಂಟು. ಸಾಮಾನ್ಯವಾಗಿ ಆಲಿಕಲ್ಲು ಹೆಸರಿಗೆ ತಕ್ಕಂತೆ ಕಲ್ಲಿನಂತಿರುತ್ತಾದರೂ ಹಿಮದ ಹರಳುಗಳಿಂದ ಕೂಡಿದ ಮೃದು ಆಲಿಕಲ್ಲು ಅನೇಕವೇಳೆ ಹಿಮವನ್ನು ಹೋಲುತ್ತದೆ. (ನೋಡಿ- ಮಳೆ) (ಎಂ.ಎಸ್.)